ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹುಟ್ಟು, ಸಾವಿಗೂ ವಿಶೇಷವಾದ ಆಚರಣೆ, ನೀತಿ ನಿಯಮಗಳಿವೆ. ಆದರೆ ಎಲ್ಲೋ ಉದ್ಭವಿಸಿ ದೇಶಕ್ಕೂ ಕಾಡ್ಗಿಚ್ಚಿನಂತೆ ಹರಡಿದ ಕೊರೊನಾ ವೈರಸ್ ಎನ್ನೋ ಮಹಾಮಾರಿ ನಿಯಂತ್ರಿಸಲು ಸರ್ಕಾರ ದೇಶದಲ್ಲಿ ಲಾಕ್‍ಡೌನ್ ಮಾಡಿ ಹಂತ ಹಂತವಾಗಿ ಸಡಿಲಗೊಳಿಸುತ್ತಿದೆ. ಆದರೆ ಪಿಂಡ ಪ್ರದಾನದಂತಹ ಆಚರಣೆಗೆ ಇನ್ನೂ ಅವಕಾಶ ಸಿಗದ ಹಿನ್ನೆಲೆಯಲ್ಲಿ ಈ ಜಿಲ್ಲೆಯ ಜನರು ನೋವಿನ ಮೇಲೆ ಮತ್ತಷ್ಟು ಪಡಬಾರದ ಕಷ್ಟ ಪಡುವಂತೆ ಆಗಿದೆ.
ಪ್ರಾಕೃತಿಕ ಸೌಂದರ್ಯದಲ್ಲೂ ವಿಶೇಷವಾಗಿರುವ ಕೊಡಗು ವಿಶಿಷ್ಟ ಆಚರಣೆಗಳ ಮೂಲಕವೂ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಮಗು ಹುಟ್ಟಿದರೆ, ಗುಂಡು ಹಾರಿಸಿ ವೀರನೊಬ್ಬ ಹುಟ್ಟಿದನೆಂದು ಸಂಭ್ರಮಿಸುತ್ತಾರೆ. ಹಾಗೆಯೇ ಯಾರಾದರೂ ಸತ್ತರೂ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡಿ ಆತ್ಮಕ್ಕೆ ಸದ್ಗತಿ ದೊರಕಿಸಿದೆವೆಂಬ ಭಾವದಿಂದ ನಿಟ್ಟುಸಿರು ಬಿಡುತ್ತಾರೆ.
Advertisement
Advertisement
ಆದರೆ ಎಲ್ಲೋ ಹುಟ್ಟಿ ದೇಶಕ್ಕೂ ವಕ್ಕರಿಸಿದ ಮಹಾಮಾರಿಯನ್ನು ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿ ಮೂರು ತಿಂಗಳು ಪೂರೈಸುತ್ತಿದ್ದರೂ ಇಂದಿಗೂ ಸಂಪೂರ್ಣ ಸಡಿಲಿಕೆಯಾಗಿಲ್ಲ. ಹೀಗಾಗಿ ಸತ್ತು ಮೂರು ತಿಂಗಳಾದರೂ ಪಿಂಡ ಪ್ರದಾನ ಮಾಡದೇ ಇಂದಿಗೂ ಅವರ ಆತ್ಮಗಳಿಗೆ ಸದ್ಗತಿ ದೊರಕಿಸಲು ಸಾಧ್ಯವಾಗುತ್ತಿಲ್ಲ. ಕೊಡಗಿನಲ್ಲಿ ಪಿಂಡ ಪ್ರದಾನ ಮಾಡುವವರು ಸತ್ತವರ ಪಿಂಡ ಪ್ರದಾನ ಮಾಡದ ಹೊರತ್ತು ಎಷ್ಟು ದಿನಗಳಾದರೂ ಮನೆಯಿಂದ ಹೊರಗೆ ಹೆಜ್ಜೆ ಕೂಡ ಹಿಡುವಂತಿಲ್ಲ. ಹೀಗಾಗಿ ಮೊದಲೇ ನೋವು ಅನುಭವಿಸಿದ ಜನರು ಮತ್ತಷ್ಟು ಕಷ್ಟಗಳನ್ನು ಅನುಭವಿಸುವಂತೆ ಆಗಿದೆ.
Advertisement
ಅದರಲ್ಲೂ ಮನೆಯಲ್ಲಿ ದುಡಿಯುವವರು, ಮನೆಯ ಜವಾಬ್ದಾರಿ ನಿಭಾಯಿಸಲು ಯಾರು ಇಲ್ಲದವರಂತು ಪಿಂಡ ಪ್ರದಾನ ಮಾಡದೆ ಮನೆಯಲ್ಲೇ ಉಳಿದುಕೊಂಡು ಪಡಬಾರದ ಕಷ್ಟ ಪಡುವಂತಾಗಿದೆ. ಹೀಗಾಗಿ ಪಿಂಡ ಪ್ರದಾನಕ್ಕಾದರೂ ಸರ್ಕಾರ ಅವಕಾಶ ನೀಡಬೇಕು ಎನ್ನೋದು ಜನರ ಅಳಲು.
Advertisement
ಮಾರ್ಚ್ ಮೂರನೇ ವಾರದಲ್ಲಿ ದೇಶವನ್ನು ಲಾಕ್ ಡೌನ್ ಮಾಡಿದಾಗಿನಿಂದ ಇದೂವರೆಗೆ ಕೊಡಗಿನಲ್ಲಿ ಹತ್ತಾರು ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಸಾಕಷ್ಟು ಜನರು ಮೂರು ತಿಂಗಳಾದರೂ ಅವಕಾಶವಿಲ್ಲದೆ ಇಂದಿಗೂ ಪಿಂಡ ಪ್ರದಾನ ಮಾಡಲು ಸಾಧ್ಯವೇ ಆಗಿಲ್ಲ. ಇನ್ನು ಕೊಡಗಷ್ಟೇ ಅಲ್ಲದೆ ಹೊರ ಜಿಲ್ಲೆಯಿಂದಲೂ ಪಿಂಡ ಪ್ರದಾನಕ್ಕೆ ಬಂದವವರು ಸಾಕಷ್ಟು ಜನರಿದ್ದಾರೆ. ಆದರೆ ಬೇರೆ ದಾರಿಯೇ ಇಲ್ಲದೆ ಸರ್ಕಾರ ಅವಕಾಶ ನೀಡದಿದ್ದರೂ ಜನರು ಕದ್ದು ಮುಚ್ಚಿ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡುತ್ತಿದ್ದಾರೆ.
ಆದರೆ ಇದೇ ಸಮಯವನ್ನು ದುರ್ಬಳಕೆ ಮಾಡಿಕೊಂಡಿರುವ ಕೆಲವರು ಪಿಂಡ ಪ್ರದಾನ ಮಾಡುವುದಕ್ಕೆ ಜನರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ಜನರು ಕೂಡ ಒಂದೆಡೆ ತಮ್ಮ ಕುಟುಂಬದ ಸತ್ತವರ ಆತ್ಮಕ್ಕೆ ಸದ್ಗತಿ ದೊರಕಿಸಲು ಮತ್ತು ತಾವೂ ಕೂಡ ಹೊರಗಡೆ ಹೋಗಿ ತಮ್ಮ ಬದುಕನ್ನು ನಿಬಾಯಿಸುವುದಕ್ಕಾಗಿ ಬೇರೆ ದಾರಿಯಿಲ್ಲದೆ ಹೆಚ್ಚಿನ ಹಣವನ್ನು ನೀಡಿ ಪಿಂಡ ಪ್ರದಾನ ಮಾಡುತ್ತಿದ್ದಾರೆ.