CricketLatestMain PostSports

ಸತತ ಸೋಲಿನಿಂದ ಕಂಗೆಟ್ಟ ಹೈದರಾಬಾದ್- ನಾಯಕತ್ವದಿಂದ ಕೆಳಗಿಳಿದ ವಾರ್ನರ್

ಅಹಮದಾಬಾದ್: 14ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಸತತ ಸೋಲಿನಿಂದ ಕಂಗೆಟ್ಟ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕತ್ವದ ಬದಲಾವಣೆಯಾಗಿದೆ. ನಾಯಕನ ಪಟ್ಟದಿಂದ ಡೇವಿಡ್ ವಾರ್ನರ್ ಅವರನ್ನು ಕೆಳಗಿಳಿಸಿ ಕೇನ್ ವಿಲಿಯಮ್ಸನ್ ಅವರಿಗೆ ಹೈದರಾಬಾದ್ ತಂಡದ ನಾಯಕನ ಪಟ್ಟ ಕಟ್ಟಲಾಗಿದೆ.

ಈ ಕುರಿತು ಅಧಿಕೃತವಾಗಿ ತಿಳಿಸಿರುವ ಹೈದರಾಬಾದ್ ಫ್ರಾಂಚೈಸಿ, ಹೈದರಾಬಾದ್ ತಂಡವನ್ನು ಮೊದಲ 6 ಪಂದ್ಯಗಳಲ್ಲಿ ಮುನ್ನಡೆಸಿದ್ದ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮುಂದಿನ ಪಂದ್ಯಗಳಿಗೆ ವಿಲಿಯಮ್ಸನ್ ಅವರಿಗೆ ನಾಯಕತ್ವದ ಜವಬ್ದಾರಿ ವಹಿಸಲಾಗಿದೆ. ವಾರ್ನರ್ ಮುಂದಾಳತ್ವದಲ್ಲಿ ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿರುವ ಕಾರಣಕ್ಕೆ ಮುಂದಿನ ಪಂದ್ಯಗಳಿಗೆ ವಿಲಿಯಮ್ಸನ್ ನಾಯಕರಾಗಿರಲಿದ್ದಾರೆ ಎಂದು ತಿಳಿಸಿದೆ.

ವಾರ್ನರ್ ಹಲವು ವರ್ಷಗಳಿಂದ ಹೈದರಾಬಾದ್ ತಂಡದಲ್ಲಿ ಅಡುತ್ತಿದ್ದಾರೆ. ಆದರೆ ಈ ಬಾರಿ ವಾರ್ನರ್ ಆಟಗಾರನಾಗಿ ತಂಡಕ್ಕೆ ನೆರವಾಗಲಿದ್ದಾರೆ ಎಂದು ಹೈದರಾಬಾದ್ ಆಡಳಿತ ಮಂಡಳಿ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ವಾರ್ನರ್ ಕುರಿತು ಅಭಿಪ್ರಾಯಪಟ್ಟಿದೆ.

ಹೈದರಾಬಾದ್ ತಂಡ ವಾರ್ನರ್ ನಾಯಕತ್ವದಲ್ಲಿ 2016ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು. ಹೈದರಾಬಾದ್ ಪರ ವಾರ್ನರ್ 1015 ರಿಂದ 2019ರ ಮಧ್ಯೆ ಮೂರು ಬಾರಿ ಅತೀ ಹೆಚ್ಚು ರನ್ ಸಿಡಿಸಿ ಆರೆಂಜ್ ಕ್ಯಾಪ್‍ನ ಒಡೆಯನಾಗಿದ್ದರು. ಹಾಗೆ ಕಳೆದ 6 ಸೀಸನ್‍ಗಳಲ್ಲಿ ಹೈದರಾಬಾದ್ ತಂಡದ ಪರ 500ಕ್ಕೂ ಹೆಚ್ಚು ರನ್ ಸಿಡಿಸಿದ ಆಟಗಾರನಾಗಿ ವಾರ್ನರ್ ಮಿಂಚಿದ್ದರು.

ವಾರ್ನರ್ ಹೈದರಾಬಾದ್ ತಂಡವನ್ನು 2015, 2016, 2017 ಮತ್ತು 2020ರ ಸೀಸನ್‍ಗಳಲ್ಲಿ ಪ್ಲೇಆಪ್ ಹಂತಕ್ಕೆ ಏರಿಸಿದ್ದರು. ಅಷ್ಟೆ ಅಲ್ಲದೆ ಐಪಿಎಲ್‍ನಲ್ಲಿ ವಾರ್ನರ್ 148 ಪಂದ್ಯಗಳನ್ನು ಆಡಿ 140.13 ಸ್ಟ್ರೈಕ್ ರೇಟ್‍ನಲ್ಲಿ 5,447 ರನ್ ಗಳಿಸಿದ್ದಾರೆ. ಇದು ಮಾತ್ರವಲ್ಲದೆ ಐಪಿಎಲ್ ಇತಿಹಾಸದಲ್ಲೇ 50 ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇಷ್ಟೆಲ್ಲ ಸಾಧನೆ ಮಾಡಿರುವ ವಾರ್ನರ್ ಅವರನ್ನು ನಾಯಕತ್ವದಿಂದ ಫ್ರಾಂಚೈಸಿ ತೆಗೆದು ಹಾಕುತ್ತಿದ್ದಂತೆ ಅಭಿಮಾನಿಗಳು ಕಿಡಿಕಾರಿದ್ದಾರೆ. ತಂಡದ ಒಳಿತಿಗಾಗಿ ವಾರ್ನರ್ ನಾಯಕತ್ವದಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

Back to top button