Connect with us

Bengaluru City

ಸಚಿವ ಮಾಧುಸ್ವಾಮಿ ಎಡವಟ್ಟು, ಸರ್ಕಾರಕ್ಕೆ ಇಕ್ಕಟ್ಟು- ಸಿಎಂ ಸ್ಪಷ್ಟನೆ

Published

on

– ರೈಲು, ವಿಮಾನ ಇಲ್ಲ ಅಂದ್ರು, ರಾತ್ರಿ ಯು ಟರ್ನ್

ಬೆಂಗಳೂರು: ವ್ಯಾಪಕವಾಗಿ ಕೊರೊನಾ ಹಬ್ಬುತ್ತಿರುವ ಪಂಚ ರಾಜ್ಯಗಳಿಗೆ ವಿಮಾನಯಾನ, ರೈಲು ಸಂಚಾರ ಸಂಪೂರ್ಣ ನಿರ್ಬಂಧ ಎಂದು ಸಂಪುಟ ಸಭೆಯ ಬಳಿ ಸಚಿವ ಮಾಧುಸ್ವಾಮಿ ಘೋಷಿಸಿದ್ದರು. ಇದೀಗ ಯು ಟರ್ನ್ ಹೊಡೆದಿರುವ ಸಚಿವರು, ನಿಷೇಧ ಇಲ್ಲ. ವಿಮಾನಗಳ ಪ್ರಮಾಣ ಕಡಿಮೆ ಇರಲಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಸಚಿವರು ಸೋಂಕಿತ ರಾಜ್ಯಗಳಿಂದ ಬರೋ ರೈಲುಗಳಿಗೆ ನಿರ್ಬಂಧ ಎಂದು ಹೇಳಿದ್ದರು. ಇತ್ತ ಮುಖ್ಯಮಂತ್ರಿಗಳು ಟ್ವಿಟ್ಟರ್ ನಲ್ಲಿ ರೈಲುಗಳ ಸಂಚಾರ ಇರಲಿದೆ ಎಂದು ಹೇಳಿದ್ದಾರೆ.

ಸಂಪುಟ ಸಭೆಯ ಬಳಿಕ ಮಾತನಾಡಿದ್ದ ಸಚಿವರು, ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯದಿಂದ ಬರುವ ವ್ಯಕ್ತಿಗಳಿಗೆ ಇನ್ನು ಮುಂದೆ ಪ್ರವೇಶ ನೀಡದಿರಲು ಸರ್ಕಾರ ಮುಂದಾಗಿದೆ. ಈ ಐದು ರಾಜ್ಯಗಳಿಂದ ಬರುವ ವ್ಯಕ್ತಿಗಳಿಗೆ 15 ದಿನಗಳ ಕಾಲ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ. ರಸ್ತೆ, ರೈಲು ಮಾರ್ಗದ ಮೂಲಕ ಬರುವಂತಿಲ್ಲ. ಅಷ್ಟೇ ಅಲ್ಲದೇ ಈ ರಾಜ್ಯಕ್ಕೆ ವಿಮಾನ ಸೇವೆ ಸಹ ನೀಡದೇ ಇರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

ಯೂ ಟರ್ನ್ ಸ್ಪಷ್ಟನೆ: ರಾಜ್ಯ ಸರ್ಕಾರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಮಧ್ಯ ಪ್ರದೇಶ ಮತ್ತು ರಾಜಸ್ಥಾನದಿಂದ ಕರ್ನಾಟಕಕ್ಕೆ ಆಗಮಿಸುವ ವಿಮಾನಗಳ ಸಂಖ್ಯೆ ಕಡಿಮೆ ಮಾಡಬೇಕೆಂದು ಮನವಿ ಸಲ್ಲಿಸಿದೆ. ಅಂತರ್ ರಾಜ್ಯಗಳಿಂದ ಬಂದವರಿಂದಲೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಮನವಿ ಮಾಡಲಾಗಿದೆ. ಕೊರೊನಾ ತಡೆಗಾಗಿ ಮುಂದಿನ ಕೆಲವು ದಿನಗಳವರೆಗೆ ವಿಮಾನಗಳ ಸಂಖ್ಯೆ ಕಡಿಮೆ ಮಾಡಲು ಮನವಿ ಸಲ್ಲಿಸಲಾಗಿದೆ.

ಮುಖ್ಯಮಂತ್ರಿಗಳ ಸ್ಪಷ್ಟನೆ: ಕರ್ನಾಟಕಕ್ಕೆ ಬರುವ ಯಾವುದೇ ವಿಮಾನ ಮತ್ತು ರೈಲುಗಳಿಗೆ ನಿಷೇಧ ಹೇರಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಆದರೆ, ಕೋವಿಡ್ ಗೆ ಸಂಬಂಧಿಸಿದಂತೆ ಹೆಚ್ಚು ಅಪಾಯಕಾರಿ ಸ್ಥಾನದಲ್ಲಿರುವ ರಾಜ್ಯಗಳಿಂದ ಬರುವ ವಿಮಾನಗಳ ಸಂಖ್ಯೆಯನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಹಾಗೆಯೇ, ಇದೇ ಅಪಾಯಕಾರಿ ರಾಜ್ಯಗಳಿಂದ ಬರುವ ರಸ್ತೆ ಸಂಚಾರದ ಮೇಲಿನ ಈಗಿನ ನಿರ್ಬಂಧ ಮುಂದುವರಿಸಲಿದ್ದು, ರೈಲುಗಳು ಎಂದಿನಂತೆ ಸಂಚರಿಸಲಿವೆ ಎಂದು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *