ನವದೆಹಲಿ: ಸಚಿನ್ ಪೈಲಟ್ ಉದ್ದೇಶಿಸಿ ಹೇಳಿದ್ದಾರೆನ್ನಲಾದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿಯವರು ಪಕ್ಷದ ಯುವ ವಿಭಾಗ ಎನ್ಎಸ್ಯುಐನ ಸಭೆಯಲ್ಲಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಜನ ಪಕ್ಷ ಬಿಡುವುದರಿಂದ ಯುವಕರ ರಾಜಕೀಯ ಪ್ರವೇಶಕ್ಕೆ ಬಾಗಿಲು ತೆರೆದಂತಾಗುತ್ತದೆ ಎಂದಿದ್ದಾರಂತೆ. ರಾಹುಲ್ ಗಾಂಧಿಯವರು ಸಚಿನ್ ಪೈಲಟ್ ಅವರ ಹೆಸರನ್ನು ಉಲ್ಲೇಖಿಸದೆ ಈ ಹೇಳಿಕೆ ನೀಡಿದ್ದು, ಯಾರಾದರೂ ಪಕ್ಷ ಬಿಡಲು ಇಚ್ಚಿಸಿದರೆ ಬಿಡಲಿ. ಇದರಿಂದಾಗಿ ನಿಮ್ಮಂಥ ಯುವಕರಿಗೆ ಬಾಗಿಲು ತೆರೆದಂತಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
Advertisement
Advertisement
ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯೆ ನೀಡಿದ್ದು, ಈ ಪ್ರಸಂಗದ ವಾಸ್ತವತೆ ತಪ್ಪಾಗಿದೆ ಎಂದು ತಿಳಿಸಿದ್ದಾರೆ.
Advertisement
ಪೈಲಟ್ ಅವರನ್ನು ಇತ್ತೀಚೆಗೆ ರಾಜಸ್ಥಾನದ ಉಪಮುಖ್ಯಮಂತ್ರಿ ಸ್ಥಾನದಿಂದ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ. ಇದಾದ ಬಳಿಕ ಬಿಜೆಪಿ ಸೇರಲಿದ್ದಾರೆ ಎಂಬ ಕುರಿತು ಸಹ ಚರ್ಚೆ ನಡೆದಿತ್ತು. ಆದರೆ ಇದೀಗ ಸ್ವತಃ ಸಚಿನ್ ಪೈಲಟ್ ಪ್ರತಿಕ್ರಿಯೆ ನೀಡಿ, ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಾದ ಬೆನ್ನಲ್ಲೇ ಇಂದು ರಾಜಸ್ಥಾನದ ಪ್ರಬಲ ನಾಯಕ ಪೈಲಟ್ ಅವರನ್ನು ಕಾಂಗ್ರೆಸ್ ಮರಳಿ ಕರೆ ತರುವ ಪ್ರಯತ್ನವನ್ನು ನಡೆಸಿದೆ.
Advertisement
ಬೆಳವಣಿಗೆ ಕುರಿತು ಇಂದು ಸುರ್ಜೇವಾಲಾ ಅವರು ಪ್ರತಿಕ್ರಿಯಿಸಿ, ಸಚಿನ್ ಪೈಲಟ್ ಅವರಿಗೆ ಬಿಜೆಪಿ ಸೇರುವುದು ಇಷ್ಟವಿಲ್ಲವಾದಲ್ಲಿ ಹರಿಯಾಣದಲ್ಲಿ ಆ ಪಕ್ಷದ ಆತಿಥ್ಯ ಸ್ವೀಕರಿಸುವುದನ್ನು ನಿಲ್ಲಿಸಲಿ. ರಾಜಸ್ಥಾನದಲ್ಲಿನ ತಮ್ಮ ಮನೆ ಹಾಗೂ ಕುಟುಂಬವನ್ನು ಸೇರಲಿ ಎಂದು ತಿಳಿಸಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಮಾಜಿ ಡಿಸಿಎಂ ಸಚಿನ್ ಪೈಲಟ್, ತಾನು ಈಗಲೂ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದು, ಬಿಜೆಪಿ ಪಕ್ಷ ಸೇರ್ಪಡೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಅಸಮಾಧಾನ ಹೊಂದಿರುವ ಸಚಿನ್, ಬಿಜೆಪಿ ಸೇರ್ಪಡೆಯಾಗುತ್ತಾರಾ? ಅವರ ಮುಂದಿನ ನಡೆ ಏನು? ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.
ಇದೇ ವೇಳೆ ರಾಷ್ಟ್ರೀಯ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಪೈಲಟ್, ತಾವು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನಾನು ಬಿಜೆಪಿ ಪಕ್ಷಕ್ಕೆ ಸೋಲುಣಿಸಲು ಕಾರ್ಯನಿರ್ವಹಿಸಿದ್ದೆ. ಅಂತಹ ಪಕ್ಷಕ್ಕೆ ಏಕೆ ಸೇರ್ಪಡೆಯಾಗುತ್ತೇನೆ? ಈಗಲೂ ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಕೆಲವರು ಬಿಜೆಪಿ ಸೇರುತ್ತಿರುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಪಕ್ಷದ ವರಿಷ್ಠರಿಗೆ ನನ್ನ ಮೇಲಿನ ನಂಬಿಕೆ ಕಡಿಮೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಪೈಲಟ್ ತಿಳಿಸಿದ್ದಾರೆ.