ಶಿವಮೊಗ್ಗ: ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಈ ಬಾರಿಯ ಗಣಪತಿ ಉತ್ಸವವನ್ನು ರಾಜ್ಯ ಸರ್ಕಾರದ ಆದೇಶದ ಅನ್ವಯ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ಬಾರಿಯ ಗಣೇಶೋತ್ಸವವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈಗಾಗಿ ನಾಗರಿಕರು ಮುಂಜಾನೆ ಗಣಪತಿ ಪ್ರತಿಷ್ಠಾಪಿಸಿ ಸಂಜೆ ವಿಸರ್ಜನೆ ಮಾಡುವ ಮೂಲಕ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗಣೇಶೋತ್ಸವವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಗಣಪತಿ ಹಬ್ಬ ಕೇವಲ ಈ ವರ್ಷಕ್ಕೆ ಅಷ್ಟೇ ಸೀಮಿತವಾಗಿಲ್ಲ. ಮುಂದಿನ ಬಾರಿಯೂ ಗಣೇಶ ಹಬ್ಬ ಬರುತ್ತದೆ. ಈಗಾಗಿ ಜೀವ ಉಳಿದರೆ ಮುಂದಿನ ಬಾರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬಹುದು ಎಂದರು.
Advertisement
Advertisement
ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಗಣಪತಿ ಪ್ರತಿಷ್ಠಾಪನೆ ಮಾಡಿ. ಆದರೆ ಗಣಪತಿ ತರುವ ವೇಳೆಯಲ್ಲಿ ಆಗಲಿ, ವಿಸರ್ಜನೆ ಮಾಡುವ ಸಂದರ್ಭದಲ್ಲಿ ಆಗಲಿ ಮೆರವಣಿಗೆ ಮಾಡುವಂತಿಲ್ಲ. ಮನೆಯಲ್ಲಿ ಕೂರಿಸುವ ಗಣಪತಿ ಮೂರ್ತಿ 2 ಅಡಿ ಮೀರಬಾರದು. ಜೊತೆಗೆ 4 ಜನಕ್ಕಿಂತ ಹೆಚ್ಚಿನ ಮಂದಿ ಭಾಗವಹಿಸಬಾರದು. ಅದೇ ರೀತಿ ಸಾರ್ವಜನಿಕವಾಗಿ ಕೂರಿಸುವ ಗಣಪತಿ 4 ಅಡಿಗಿಂತ ಮೀರಿರಬಾರದು ಹಾಗೂ ಗಣಪತಿ ತರಲು 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ. ಅಲ್ಲದೇ ಮುಂಜಾನೆ ಗಣಪತಿ ಪ್ರತಿಷ್ಠಾಪಿಸಿದರೆ ಸಂಜೆ ಕತ್ತಲು ಕಳೆಯುವುದರೊಳಗೆ ಗಣಪತಿ ವಿಜರ್ಜನೆ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.
Advertisement
Advertisement
ರಾಜ್ಯ ಸರ್ಕಾರದ ತೀರ್ಮಾನದಂತೆ ಜಿಲ್ಲಾಡಳಿತ ತೆಗೆದುಕೊಂಡಿರುವ ತೀರ್ಮಾನಕ್ಕೆ ಎಲ್ಲಾ ಗಣಪತಿ ಸಂಘಟನೆಗಳು ಬದ್ಧರಾಗಿರಬೇಕು. ಗಣಪತಿ ಪ್ರತಿಷ್ಠಾಪಿಸಬೇಡಿ ಎಂದು ಜಿಲ್ಲಾಡಳಿತ ಹೇಳುತ್ತಿಲ್ಲ. ಯಾವುದೇ ಸಂಘಟನೆಯವರಾಗಲಿ ಕೂಡ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಪ್ರತಿಷ್ಠೆಯಾಗಿ ತೆಗೆದುಕೊಂಡರೆ ನಮ್ಮ ಜೀವಕ್ಕೆ ಆಪತ್ತು ಉಂಟಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.