– ಲಿಂಗನಮಕ್ಕಿ ಜಲಾಶಯ ಭರ್ತಿಗೆ 7 ಅಡಿ ಬಾಕಿ
ಕಾರವಾರ: ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಹೊನ್ನಾವರ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶರಾವತಿ ನದಿ ತುಂಬಿ ಹರಿಯುತ್ತಿದ್ದು, ಹೊನ್ನಾವರ ಭಾಗದ ತಗ್ಗು ವಸತಿ ಪ್ರದೇಶಕ್ಕೆ ನೀರು ನುಗ್ಗುತ್ತಿದೆ.
ಇಂದು ಲಿಂಗನಮಕ್ಕಿ ಜಲಾಶಯದ ಗರಿಷ್ಟ ನೀರಿನ ಮಟ್ಟ 1,819 ಅಡಿ ಇದ್ದು, ಜಲಾಶಯದ ಇಂದಿನ ನೀರಿನ ಮಟ್ಟ 1,812.30 ಅಡಿಯಾಗಿದೆ. ಜಲಾಶಯದ ಒಳ ಹರಿವು 44,367 ಕ್ಯೂಸೆಕ್ ಇದ್ದು, ಜಲಾಶಯ ಯಾವುದೇ ಸಂದರ್ಭದಲ್ಲಿ ಭರ್ತಿಯಾಗುವ ಹಿನ್ನೆಲೆಯಲ್ಲಿ ಜಲಾಶಯದ ನದಿಪಾತ್ರದ ಜನತೆಗೆ ಎಚ್ಚರಿಕೆಯಿಂದ ಇರುವಂತೆ ಜಲಾಶಯದ ಕಾರ್ಯ ನಿರ್ವಾಹಕ ಇಂಜಿನಿಯರ್ ಲಕ್ಷ್ಮಿ ವಿ. ಶಂಕರ್ ಸೂಚನೆ ನೀಡಿದ್ದಾರೆ.
Advertisement
Advertisement
ಇದಲ್ಲದೇ ಜಲಾಶಯ ಭರ್ತಿಯಾಗಿ ನೀರು ಬಿಟ್ಟಲ್ಲಿ ಹೊನ್ನಾವರ ಭಾಗದ ಗೇರುಸೊಪ್ಪ, ಗುಂಡ್ಲಬಾಳ, ಭಾಸ್ಕೇರಿ ಭಾಗದಲ್ಲಿ ಮತ್ತೆ ಪ್ರವಾಹ ಉಂಟಾಗಲಿದೆ. ಈಗಾಗಲೇ ಶರಾವತಿ ನದಿ ನೀರು ತುಂಬುತ್ತಿದ್ದು, ಹೊನ್ನಾವರ ಭಾಗದಲ್ಲಿ ಸಹ ಶರಾವತಿಗೆ ಸೇರುವ ಚಿಕ್ಕ ಪುಟ್ಟ ಹಳ್ಳಗಳು ತುಂಬಿವೆ. ಜೊತೆಗೆ ಹೊನ್ನಾವರ ಭಾಗದ ಗುಂಡ್ಲಬಾಳ, ಭಾಸ್ಕೇರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನೂರು ಎಕರೆಗೂ ಹೆಚ್ಚು ಕೃಷಿ ಜಮೀನುಗಳು ಜಲಾವೃತವಾಗಿದೆ.
Advertisement
Advertisement
ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದಲ್ಲಿ ಇನ್ನೆರೆಡು ದಿನದಲ್ಲಿ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುವ ಸಾಧ್ಯತೆಗಳಿವೆ. ಹೀಗಾಗಿ ಹೊನ್ನಾವರ ಭಾಗದ ಶರಾವತಿ ನದಿ ಭಾಗದ ವಸತಿ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಇದೇ ಭಾಗದಲ್ಲಿ ಪ್ರವಾಹ ಉಕ್ಕಿ 300ಕ್ಕೂ ಹೆಚ್ಚು ಜನರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಆದರೆ ಈಗ ಮತ್ತೆ ಇದೇ ಪ್ರದೇಶದ ಜನರಿಗೆ ಪ್ರವಾಹದ ಭೀತಿ ಎದುರಾಗಿದ್ದು, ಜನ ತೊಂದರೆ ಅನುಭವಿಸುವಂತಾಗಿದೆ.