CrimeLatestMain PostNational

ವೆಬ್ ಸಿರೀಸ್ ನೋಡಿ ಕಿಡ್ನ್ಯಾಪ್ ನಾಟಕ- 2 ಲಕ್ಷಕ್ಕೆ ಬೇಡಿಕೆ ಇಟ್ಟ ಯುವಕರು

– ತಂದೆಗೆ ಕರೆ ಮಾಡಿ ಬೆದರಿಕೆ, ಹಣಕ್ಕಾಗಿ ಒತ್ತಾಯ

ನವದೆಹಲಿ: ಜನಪ್ರಿಯ ವೆಬ್ ಸಿರೀಸ್ ನೋಡಿ 22 ವರ್ಷದ ಇಬ್ಬರು ಸೋದರ ಸಂಬಂಧಿ ಯುವಕರು ಕಿಡ್ನ್ಯಾಪ್ ಮಾಡಿದ್ದಾರೆಂದು ನಾಟಕವಾಡಿ ತಮ್ಮ ಮನೆಯವರಗೇ ಬೆದರಿಕೆ ಹಾಕಿದ್ದು, 2 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ.

ಆರೋಪಿಗಳನ್ನು ನದೀಮ್ ಹಾಗೂ ಅಫ್ತಾಬ್ ಎಂದು ಗುರುತಿಸಲಾಗಿದ್ದು, ಝಾಕೀರ್ ನಗರದ ನಿವಾಸಿಗಳಾಗಿದ್ದಾರೆ. ಕಿಡ್ನ್ಯಾಪ್ ಮಾಡಿದ್ದಾರೆಂದು ನಾಟಕವಾಡುವ ದಿನವೇ ಆರೋಪಿಗಳು ಮಹಿಳೆಯ ಮೊಬೈಲ್ ಕದ್ದಿದ್ದಾರೆ. ಅದೇ ಮೊಬೈಲ್‍ನಿಂದ ಕರೆ ಮಾಡಿ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನದೀಮ್ ತನ್ನ ತಂದೆಯ ಜೊತೆಗೆ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ತಂದೆ ಮದ್ಯ ಸೇವಿಸಲು ಬಿಡುತ್ತಿರಲಿಲ್ಲ. ಅಲ್ಲದೆ ಕುಡಿಯಲು ಹಣ ನೀಡುತ್ತಿರಲಿಲ್ಲ. ಇದರಿಂದ ಬೇಸತ್ತಿದ್ದ ಯುವಕ ‘ಬ್ರೀಥ್: ಇಂಟು ದಿ ಶಾಡೋಸ್’ ಎಂಬ ವೆಬ್ ಸರಣಿಯ ಘಟನೆಯಂತೆ ಕಿಡ್ನ್ಯಾಪ್ ನಾಟಕವಾಡುವ ಬಗ್ಗೆ ನಿರ್ಧರಿಸಿದ್ದಾನೆ. ಬಳಿಕ ತನ್ನ ಸೋದರ ಸಂಬಂಧಿ ಅಫ್ತಾಬ್ ಜೊತೆ ಸೇರಿ ಕಿಡ್ನ್ಯಾಪ್ ನಾಟಕವಾಡಿ ತಂದೆಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ 2 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಇದನ್ನರಿಯದ ಅಫ್ತಾಬ್ ತಂದೆ ಕಿಡ್ನ್ಯಾಪ್ ಆಗಿರುವ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ತಮ್ಮ ಸೋದರಳಿಯ ನದೀಮ್‍ನನ್ನು ಅಪಹರಿಸಲಾಗಿದೆ ಎಂದು ತಿಳಿಸಿದ್ದಾರೆ. ನದೀಮ್ ಬಿಡುಗಡೆ ಮಾಡಬೇಕೆಂದರೆ 2 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.

ಈ ಬಗ್ಗೆ ಆಗ್ನೇಯ ಡಿಸಿಪಿ ಆರ್.ಪಿ.ಮೀನಾ ಮಾತನಾಡಿ, ನಮ್ಮ ಪೊಲೀಸ್ ತಂಡ ತನಿಖೆ ಆರಂಭಿಸಿದ್ದು, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ ನದೀಮ್ ಮೊಬೈಲ್‍ನ ಕಾಲ್ ರೆಕಾರ್ಡ್‍ಗಳನ್ನು ಸಹ ಪಡೆದಿದ್ದೇವೆ. ಈ ವೇಳೆ ಆತ ತನ್ನ ಗೆಳತಿಯೊಂದಿಗೆ ನಿರಂತರ ಸಂಪರ್ಕ ಹೊಂದಿರುವುದು ತಿಳಿಯಿತು. ಬಳಿಕ ಅವರನ್ನು ಸಂಪರ್ಕಿಸಿದ್ದು, ನದೀಮ್ ತನ್ನ ಸೋದರ ಸಂಬಂಧಿ ಅಫ್ತಾಬ್ ಜೊತೆಗೇ ಇದ್ದಾನೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.

ಬಳಿಕ ಪೊಲೀಸರು ತಂದೆಯ ಬಳಿ ವಿಚಾರಣೆ ನಡೆಸಿದ್ದು, ತಮ್ಮ ಮಗ ಅಫ್ತಾಬ್ ಸಹ ಕಾಣೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಅಲ್ಲದೆ ಸಿಸಿಟಿವಿ ಪರಿಶೀಲಿಸಿದ್ದು, ಯಾವುದೇ ಅಪಹರಣ ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದೆಲ್ಲದರ ಮಧ್ಯೆ ಮಹಿಳೆಯೊಬ್ಬರು ಜಾಮಿಯಾ ನಗರದಲ್ಲಿ ಯಾರೋ ನನ್ನ ಮೊಬೈಲ್ ಕದ್ದಿದ್ದಾರೆ ಎಂದು ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸರು ಈ ಕುರಿತು ಸಿಸಿಟಿವಿ ಪರಿಶೀಲಿಸಿದ್ದು, ಮೊಬೈಲ್ ಕಳವು ಪ್ರಕರಣದಲ್ಲಿ ಅಫ್ತಾಬ್ ಹಾಗೂ ನದೀಮ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.

Leave a Reply

Your email address will not be published.

Back to top button