ಹುಬ್ಬಳ್ಳಿ: ಪ್ರೇಮಿಗಳಿಬ್ಬರ ಖಾಸಗಿ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿದಲ್ಲದೇ ಯುವಕನನ್ನ ಥಳಿಸಿದ ದುಷ್ಕರ್ಮಿಗಳ ಗ್ಯಾಂಗ್ ವಿರುದ್ಧ ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬೆನ್ನಲ್ಲೇ ಸಂತ್ರಸ್ತೆ ಸಹ ಪ್ರತಿದೂರು ದಾಖಲಿಸಿದ್ದಾಳೆ.
ಪ್ರೇಯಸಿಯೊಂದಿಗೆ ಪಾರ್ಕ್ನಲ್ಲಿದ್ದ ವೀಡಿಯೋವನ್ನು ಗ್ಯಾಂಗ್ವೊಂದು ಶೂಟ್ ಮಾಡಿ, ಬಳಿಕ ವೀಡಿಯೋವನ್ನು ಯುವಕ ಕುಮಾರಸ್ವಾಮಿಗೆ ತೋರಿಸಿ 5 ಲಕ್ಷ ರೂ. ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು. ಯುವಕ ಹಣ ನೀಡಲು ಒಪ್ಪದಿದ್ದಾಗ ದುಷ್ಕರ್ಮಿಗಳು ಕುಮಾರಸ್ವಾಮಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ಕುರಿತಂತೆ ಯುವಕನ ತಾಯಿ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
Advertisement
ಈ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರಕರಣದ ಪ್ರಮುಖ ರೂವಾರಿಯಾಗಿರುವ ಯುವತಿ ಸಹ ಇಂದು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ.
Advertisement
ದೂರಿನಲ್ಲಿ ಏನಿದೆ?
ದೂರಿನಲ್ಲಿ ಸಂತ್ರಸ್ತ ಯುವತಿ ನಾನು ನರ್ಸ್ ಕೋರ್ಸ್ ಮಾಡುವ ವೇಳೆ ಬಿಸಿಎಂ ಹಾಸ್ಟೆಲ್ನಲ್ಲಿ ರೂಮ್ ಹುಡುಕಾಟದಲ್ಲಿದ್ದಾಗ ಆರೋಪಿ ಕುಮಾರಸ್ವಾಮಿ ಪರಿಚಯವಾಗಿತ್ತು. ಕುಮಾರಸ್ವಾಮಿ ತನಗೆ ಬಿಸಿಎಂ ಹಾಸ್ಟೆಲ್ನಲ್ಲಿರುವ ಅಧಿಕಾರಿಗಳು ಪರಿಚಯ ಇದ್ದಾರೆ ಎಂದು ನಂಬಿಸಿದ್ದನು. ನಂತರ ಹಾಸ್ಟೆಲ್ ವಿಚಾರ ಮಾತನಾಡುವುದು ಇದೆ ಎಂದು ಹೇಳಿ ತನ್ನ ಅಂಗಡಿಗೆ ಕರೆಯಿಸಿಕೊಂಡು ಪ್ರೀತಿ ಮಾಡುವುದಾಗಿ ಹೇಳಿದ್ದ. ಆದರೆ ನಾನು ಒಪ್ಪದಿದ್ದಾಗ ಕೆಲವು ದಿನಗಳ ಬಳಿಕ ತನ್ನ ಮನೆಯಲ್ಲಿ ನಮ್ಮಿಬ್ಬರ ಮದುವೆ ವಿಷಯ ಮಾತನಾಡುವುದು ಇದೆ. ಮನೆಗೆ ಬಾ ಎಂದು ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ, ಲೈಂಗಿಕ ಚಟುವಟಿಕೆಯ ವೀಡಿಯೋ ರೆರ್ಕಾಡ್ ಮಾಡಿಕೊಂಡಿದ್ದಾನೆ.
Advertisement
ನಂತರ ಮದುವೆಯ ವಿಷಯದ ಬಗ್ಗೆ ಯಾರಿಗಾದರೂ ತಿಳಿಸಿದರೆ, ನಿನ್ನ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಶ್ಲೀಲ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ವೇಳೆ ನಮ್ಮಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಆದ ವೇಳೆ ಕಾಲು ಜಾರಿ ಬಿದ್ದು ಕುಮಾರಸ್ವಾಮಿ ತಲೆಗೆ ಪೆಟ್ಟಾಗಿತ್ತು. ಅದನ್ನೇ ಬಳಸಿಕೊಂಡು ಇದೀಗ ಮಧ್ಯಸ್ಥಿಕೆ ಮಾಡಲು ಬಂದವರ ವಿರುದ್ಧ ದೂರು ನೀಡಿದ್ದಾನೆ. ಹೀಗಾಗಿ ನನಗೆ ನ್ಯಾಯ ಕೊಡಿಸಬೇಕೆಂದು ಸಂತ್ರಸ್ತ ಯುವತಿ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಈ ಸಿಡಿ ಪ್ರಕರಣದಲ್ಲಿ ಈಗಾಗಲೇ ಕುಮಾರಸ್ವಾಮಿ ತಾಯಿಯ ದೂರಿನ ಮೇರೆಗೆ ಹತ್ತು ಜನರ ವಿರುದ್ಧ ಗೋಕುಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಇದೀಗ ಸಂತ್ರಸ್ತ ಯುವತಿ ಪ್ರತಿ ದೂರು ಸಲ್ಲಿಸಿದ್ದು, ವಿದ್ಯಾನಗರ ಪೊಲೀಸರು ಪ್ರೇಮಿ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.