Connect with us

Karnataka

ವಿಜಯಪುರ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿ ರಫೇಲ್ ಸಾರಥಿ

Published

on

– ವಿಜಯಪುರ ಸೈನಿಕ ಶಾಲೆಗೆ ಮತ್ತೊಂದು ಗರಿ

ವಿಜಯಪುರ: ಒಂದೆಡೆ ಮೊದಲ ಹಂತದ 5 ರಫೇಲ್ ಯುದ್ಧ ವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗುತ್ತಿರುವುದಕ್ಕೆ ದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದರೆ, ಇನ್ನೊಂದೆಡೆ ವಿಜಯಪುರ ಸೈನಿಕ ಶಾಲೆಗೆ ಮತ್ತೊಂದು ಗರಿ ಬಂದಂತಾಗಿದೆ.

ಇತ್ತೀಚೆಗಷ್ಟೆ ಫ್ರಾನ್ಸ್ ನಿಂದ ಭಾರತೀಯ ಸೇನೆಗೆ ಸೇರ್ಪಡೆಯಾದ ರಫೇಲ್ ಜೆಟ್ ಗೆ ಪೈಲಟ್ ಆಗಿ ವಿಜಯಪುರ ಸೈನಿಕ ಶಾಲೆಯ ವಿದ್ಯಾರ್ಥಿ ಕಮಾಂಡರ್ ಆಯ್ಕೆಯಾಗಿದ್ದಾರೆ. ವಿವಿಧ ಸೈನಿಕ ಶಾಲೆಯ ನಾಲ್ವರು ಕಮಾಂಡರ್ ಗಳು ಪೈಲಟ್ ಆಗಿ ಆಯ್ಕೆ ಆಗಿದ್ದಾರೆ. ಇದರಲ್ಲಿ ವಿಜಯಪುರ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅರುಣ್ ಕುಮಾರ್ ಸಹ ಆಯ್ಕೆಯಾಗಿದ್ದಾರೆ. ಮೂಲತಃ ಬಿಹಾರದವರಾದ ಅರುಣ್ ಕುಮಾರ್, ವಿಜಯಪುರ ಸೈನಿಕ ಶಾಲೆಯಲ್ಲಿ ಅಭ್ಯಾಸ ಮಾಡಿರುವುದು ಇದೀಗ ಸಂತಸದ ಸಂಗತಿಯಾಗಿದೆ. ಇದರಿಂದ ವಿಜಯಪುರದ ಸೈನಿಕ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಭಾರತೀಯ ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದ ಅರುಣ್ ಕುಮಾರ್, 1995 ರಿಂದ 2001ರ ಬ್ಯಾಚ್‍ನ ವಿದ್ಯಾರ್ಥಿಯಾಗಿದ್ದು, ಜನವರಿ 2002ರಲ್ಲಿ ಎನ್‍ಡಿಎ(ನ್ಯಾಷನಲ್ ಡಿಫೆನ್ಸ್ ಆರ್ಮಿ) ಗೆ ಸೇರ್ಪಡೆಯಾಗಿ ಸೇವೆ ಸಲ್ಲಿಸಿದ್ದಾರೆ. ಅರುಣ್ ಕುಮಾರ್ ತಂದೆ ಎನ್.ಪ್ರಸಾದ್ ಸಹ ಭಾರತೀಯ ವಾಯು ಸೇನೆಯಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಅರುಣ್ ಕುಮಾರ್ ಸಾಧನೆಗೆ ಅವರ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಹಬ್ಬದ ರೀತಿಯ ವಾತಾವರಣವೇ ನಿರ್ಮಾಣವಾಗಿದೆ.

ಈ ಕುರಿತು ಅರುಣ್ ಕುಮಾರ್ ಅವರ ಶಿಕ್ಷಕರು ಮಾತನಾಡಿದ್ದು, ವಿಜಯಪುರ ಸೈನಿಕ ಶಾಲೆಗೆ ಇದೊಂದು ಹೆಮ್ಮೆಯ ವಿಷಯ. ಇತ್ತೀಚೆಗಷ್ಟೆ ಫ್ರಾನ್ಸ್ ನಿಂದ ಭಾರತ ಸೇನೆಗೆ ಸೇರ್ಪಡೆಯಾದ ರಫೆಲ್ ಜೆಟ್ ಗೆ ವಿವಿಧ ಸೈನಿಕ ಶಾಲೆಯ ನಾಲ್ವರು ಕಮಾಂಡರ್ ಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ವಿಜಯಪುರದ ಸೈನಿಕ ಶಾಲೆಯಲ್ಲಿ ಕಲಿತಿದ್ದ ವಿದ್ಯಾರ್ಥಿ ಸಹ ಇರುವುದು ಸಂತಸ ತಂದಿದೆ. ಭಾರತೀಯ ವಾಯು ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದ ಅರುಣ್ ಕುಮಾರ್ ಸಾಧನೆ ಮಹತ್ತರವಾದದ್ದು. ಸುಮಾರು 35 ವರ್ಷದ ಅರುಣ್ ಕುಮಾರ್ ವಿಜಯಪುರದ ಸೈನಿಕ ಶಾಲೆಯ 1995 ರಿಂದ 2001ರ ಬ್ಯಾಚ್ ವಿದ್ಯಾರ್ಥಿ. ಜನವರಿ 2002ರಲ್ಲಿ ಅವರು ಎನ್‍ಡಿಎ(ನ್ಯಾಷನಲ್ ಡಿಫೆನ್ಸ್ ಆರ್ಮಿ) ಗೆ ಸೇರ್ಪಡೆಯಾಗಿ ಸೇವೆ ಸಲ್ಲಿಸಿದ್ದಾರೆ. ಅರುಣ್ ಕುಮಾರ್ ತಂದೆ ಎನ್.ಪ್ರಸಾದ್ ಸಹ ಏರ್ ಫೋರ್ಸ್ ನಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ವಾಯು ಸೇನೆಗೆ ಬಲ ತುಂಬಬಲ್ಲ ಅತ್ಯಾಧುನಿಕ ಗೇಮ್ ಚೇಂಜರ್ ಯುದ್ಧ ವಿಮಾನ ರಫೇಲ್ ಭಾರತದಲ್ಲಿ ಲ್ಯಾಂಡ್ ಆಗಿದೆ. 5 ರಫೇಲ್ ವಿಮಾನಗಳು ಹರ್ಯಾಣದ ಅಂಬಾಲ ವಾಯುನೆಲೆಯಲ್ಲಿ ಮಧ್ಯಾಹ್ನ 3.10ರ ವೇಳೆಗೆ ಲ್ಯಾಂಡ್ ಆದವು. ಯುದ್ಧ ವಿಮಾನಗಳು ಆಗಮಿಸುವ ಹಿನ್ನೆಲೆ ಇವುಗಳ ಸ್ವಾಗತಕ್ಕೆ ಹರ್ಯಾಣದಲ್ಲಿರುವ ಅಂಬಾಲ ವಾಯುನೆಲೆ ಮೊದಲೇ ಸಜ್ಜುಗೊಂಡಿತ್ತು. ರಫೇಲ್ ಭಾರತದ ವಾಯುಸೀಮೆಯನ್ನು ಪ್ರವೇಶಿಸುತ್ತಿದ್ದಂತೆ ಎರಡು ಸುಖೋಯ್ ವಿಮಾನಗಳು ಸ್ವಾಗತಿಸಿ ಬೆಂಗಾವಲಾಗಿ ಅಂಬಾಲಕ್ಕೆ ಕರೆದುಕೊಂಡು ಬಂದವು.

ಕೊರೊನಾ ಇರುವುದರಿಂದ ಹಾಗೂ ಬಿಗಿ ಭದ್ರತೆ ಕೈಗೊಳ್ಳುವ ಉದ್ದೇಶದಿಂದ ಅಂಬಾಲದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಂಬಾಲ ವಾಯುನೆಲೆಗೆ ಹೊಂದಿಕೊಂಡಿರುವ ನಾಲ್ಕು ಹಳ್ಳಿಗಳಲ್ಲಿ ಸೆಕ್ಷನ್ 144 ಜಾರಿಗೊಂಡಿದೆ.

ಭಾರತ ಫ್ರಾನ್ಸ್ ನ ಡಸಾಲ್ಟ್ ಸಂಸ್ಥೆ ಜೊತೆ ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಖರೀದಿಸುವ ಸಂಬಂಧ ಒಪ್ಪಂದ ನಡೆದಿತ್ತು. ಇದೀಗ ಈ ಪೈಕಿ ಮೊದಲ ಬ್ಯಾಚ್‍ನ ಐದು ವಿಮಾನಗಳು ಸೋಮವಾರ ಫ್ರಾನ್ಸ್ ನಿಂದ ಟೇಕಾಫ್ ಆಗಿ ಮಂಗಳವಾರ ಯುಎಇಯಲ್ಲಿರುವ ದಫ್ರಾ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದ್ದವು. ಅಲ್ಲಿಂದ ಹೊರಟ ವಿಮಾನ ಈಗ ಭಾರತದಲ್ಲಿ ಲ್ಯಾಂಡ್ ಆಗಿವೆ.

ಸ್ವದೇಶಿ ಐಎನ್‍ಎಸ್ ನೌಕೆ ರಫೇಲ್ ಲೀಡರ್ ಗೆ ಭಾರತಕ್ಕೆ ಸ್ವಾಗತ ಎಂದು ಹೇಳಿ ಹ್ಯಾಪಿ ಲ್ಯಾಂಡಿಂಗ್ ಸಂದೇಶ ಕಳುಹಿಸಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಡಿಯೋ ಟ್ವೀಟ್ ಮಾಡಿ ಸ್ವಾಗತ ಕೋರಿದ್ದರು. ಇದನ್ನೂ ಓದಿ: ರಫೇಲ್‌ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್‌ ಅಹ್ಮದ್

2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್ ವಿಮಾನಗಳನ್ನು(28 ಸಿಂಗಲ್ ಸೀಟರ್, 8 ಡಬಲ್ ಸೀಟರ್) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್ ನ ಡಸಾಲ್ಟ್ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‍ಲೈನ್ ವಿಧಿಸಲಾಗಿತ್ತು. ಈ ಡೆಡ್‍ಲೈನ್‍ಗೆ ಅನುಗುಣವಾಗಿ ಮೊದಲ ಬ್ಯಾಚ್‍ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್ ನಲ್ಲಿ ತರಬೇತಿ ನೀಡಲು ಬಳಕೆಯಾಗಲಿವೆ. ಎಲ್ಲ ವಿಮಾನಗಳು 2021ರ ಡಿಸೆಂಬರ್ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿವೆ. ಇದನ್ನೂ ಓದಿ: ಕನಸು ನನಸು.. ಗೇಮ್‌ ಚೇಂಜರ್‌ ರಫೇಲ್‌ ಭಾರತದಲ್ಲಿ ಲ್ಯಾಂಡ್‌

Click to comment

Leave a Reply

Your email address will not be published. Required fields are marked *