ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತು – 7 ಜನ ಪಿಡಿಓಗಳು ಅಮಾನತು

Advertisements

ಬೀದರ್ : ಭಾಲ್ಕಿ ತಾಲೂಕಿನ ವಿವಿಧ ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತಾದ ಹಿನ್ನಲೆಯಲ್ಲಿ 7 ಜನ ಪಿಡಿಓಗಳನ್ನು ಅಮಾನತು ಮಾಡಲಾಗಿದೆ.

ಬೀದರ್‍ನ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ 2015 ರಿಂದ 2019ರವರೆಗೆ ಅನುಷ್ಠಾನಗೊಂಡ ವಿವಿಧ ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತಾಗಿದೆ. ಈ ಹಿನ್ನಲೆ ಜಿಲ್ಲಾ ಪಂಚಾಯತ್ ಸಿಇಓ ಗ್ಯಾನೇಂದ್ರಕುಮಾರ್ ಈ ಆದೇಶ ಹೊರಡಿಸಿದ್ದಾರೆ.

Advertisements

ಬಾಳೂರು ಗ್ರಾಮ ಪಂಚಾಯತಿ ಪಿಡಿಓ ಸಂಗಮೇಶ ಸಾವಳೆ, ಬೀರಿ ಗ್ರಾಮಪಂಚಾಯತಿ ಪಿಡಿಓ ಮಲ್ಲೇಶ್ ಮಾರುತಿ, ಜ್ಯಾಂತಿ ಗ್ರಾಮಪಂಚಾಯತಿ ಪಿಡಿಓ ರೇವಪ್ಪ, ಮೊರಂಬಿ ಗ್ರಾಮಪಂಚಾಯತಿ ಪಿಡಿಓ ರೇಖಾ, ತಳವಾಡ ಕೆ ಗ್ರಾಮಪಂಚಾಯತಿ ಪಿಡಿಓ ಚಂದ್ರಶೇಖರ, ವರವಟ್ಟಿ ಗ್ರಾಮಪಂಚಾಯತಿ ಪಿಡಿಓ ಸಂತೋಷ್, ಎಣಕೂರು ಗ್ರಾಮಪಂಚಾಯತಿ ಪಿಡಿಓ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

ವಸತಿ ಯೋಜನೆಯ ಮನೆಗಳನ್ನು ನಿಜವಾದ ಫಲಾನುಭವಿಗಳಿಗೆ ಹಂಚಿಕೆ ಮಾಡದೇ, ತಮ್ಮ ಬೆಂಬಲಿಗರಿಗೆ ಖಂಡ್ರೆ ಹಂಚಿಕೆ ಮಾಡಿದ್ದಾರೆ. ಈ ಮೂಲಕ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ವಸತಿ ಯೋಜನೆಯ ಮನೆಗಳ ಹಂಚಿಕೆಯಲ್ಲಿ ಅಕ್ರಮ ಮಾಡಿದ್ದಾರೆ ಎಂದು ಸಂಸದ ಭಗವಂತ್ ಖೂಬಾ ಆರೋಪ ಮಾಡಿದ್ದರು.

Advertisements

ಸಂಸದರ ಆರೋಪ ಹಿನ್ನೆಲೆ ರಾಜ್ಯ ಮಟ್ಟದ ಅಧಿಕಾರಿಗಳ ತಂಡ ಭಾಲ್ಕಿಗೆ ಬಂದು ತನಿಖೆ ಮಾಡಿತ್ತು. ಒಟ್ಟು 26 ಸಾವಿರ ವಸತಿಗಳಲ್ಲಿ 9 ಸಾವಿರ ವಸತಿಗಳಲ್ಲಿ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗಿತ್ತು. ರಾಜ್ಯ ತಂಡ ತನಿಖೆ ಮಾಡಿ 8 ತಿಂಗಳ ಬಳಿಕ ಜಿಲ್ಲಾ ಪಂಚಾಯತ್ ಅಧಿಕಾರಿಗಳ ವಿರುದ್ಧ ಈ ಕ್ರಮ ತೆಗೆದುಕೊಂಡಿದೆ.

Advertisements
Exit mobile version