ರೈತರಿಂದಲೇ ಟೊಮೇಟೋ ಖರೀದಿಸಿ ಅಗತ್ಯ ಇದ್ದವರಿಗೆ ಹಂಚಿದ ನಟ ಉಪೇಂದ್ರ

Public TV
2 Min Read
upendra 1

ಬೆಂಗಳೂರು: ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಸಿನಿಕಾರ್ಮಿಕರಿಗೆ, ಬಡವರಿಗೆ ದಿನಸಿ ಕಿಟ್‍ಗಳನ್ನು ನೀಡುತ್ತಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಈಗ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅಗತ್ಯ ಇರುವವರಿಗೆ ಹಂಚುತ್ತಿದ್ದಾರೆ.

ಈಗಾಗಲೇ ಸುಮಾರು 3 ಸಾವಿರ ಸಿನಿಕಾರ್ಮಿಕರ ಕುಟುಂಬಕ್ಕೆ ದಿನಸಿ ಕಿಟ್ ನೀಡಿದ್ದಾರೆ. ಇದೀಗ ಅವರು ರೈತರ ಸಂಕಷ್ಟಕ್ಕೂ ಮಿಡಿದಿದ್ದಾರೆ. ರೈತರು ಬೆಳೆದ ಬೆಳೆಯನ್ನು ನೇರವಾಗಿ ಅವರಿಂದಲೇ ಖರೀದಿಸುವುದಾಗಿ ಉಪ್ಪಿ ಹೇಳಿದ್ದರು. ಇದೀಗ ಅದು ಕೂಡ ನೆರವೇರಿದೆ.

ಕೊರೊನಾ ಲಾಕ್‍ಡೌನ್‍ನಿಂದಾಗಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೇ ಎಷ್ಟೋ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾನಿಗಳು ನೀಡಿರುವ ಹಣದಲ್ಲಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ, ಅದನ್ನು ದಿನಸಿ ಕಿಟ್‍ಗಳ ಜೊತೆಗೆ ವಿತರಿಸುತ್ತೇವೆ ಎಂದು ಉಪೇಂದ್ರ ಹೇಳಿದ್ದರು.

ಇದೀಗ ಹಳ್ಳಿಗಳಿಂದ ನೇರವಾಗಿ ರೈತರಿಂದಲೇ ಟೊಮೇಟೋ ಖರೀದಿಸಿದ್ದಾರೆ. ಟೊಮೇಟೋ ತುಂಬಿದ ಟ್ರಕ್‍ವೊಂದು ಈಗ ಉಪ್ಪಿ ಮನೆ ಮುಂದೆ ಬಂದು ನಿಂತಿದೆ. ಇದರ ಜೊತೆಗೆ ರೈತರಿಗೆ ಒಂದು ಮನವಿಯನ್ನು ಉಪೇಂದ್ರ ಮಾಡಿಕೊಂಡಿದ್ದಾರೆ. ರೈತರ ಗಮನಕ್ಕೆ ನಿಮ್ಮೆಲ್ಲರ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು. ಬೆಳೆದ ಬೆಳೆ ವ್ಯಾಪಾರವಾಗದೇ ನಾಶವಾಗುವ ಬೆಳೆಯನ್ನು ನಾವು ಕೊಂಡು, ಅದನ್ನು ಸಂಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಹಂಚುತ್ತಿದ್ದೇವೆ. ಇದು ವ್ಯಾಪಾರ ಎಂದು ದಯವಿಟ್ಟು ತಿಳಿಯಬೇಡಿ. ಅಂತಹ ಸಂಕಷ್ಟದಲ್ಲಿರುವ ರೈತರು ಸಂಪರ್ಕಿಸಿ ಎಂದು ಹೇಳಿದ್ದಾರೆ.

ರೈತರ ಬೆಳೆಯನ್ನು ಖರೀದಿ ಮಾಡಿ ಅಗತ್ಯ ಇರುವವರಿಗೆ ಹಂಚಿಕೆ ಮಾಡುತ್ತಿರುವ ಉಪೇಂದ್ರ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

Share This Article