ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಈ ಮೂಲಕ ಕಳೆದ ಮೂರು ತಿಂಗಳ ಬಳಿಕ ಶೌವಿಕ್ ಜೈಲಿನಿಂದ ಬಿಡುಗಡೆಯಾದಂತಾಗಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ರಿಯಾ ಚಕ್ರವರ್ತಿ ಹಾಗೂ ಶೌವಿಕ್ ಚಕ್ರವರ್ತಿ ಇಬ್ಬರನ್ನು ಬಂಧಿಸಿತ್ತು. ಈ ಹಿಂದೆ ರಿಯಾ ಚಕ್ರವರ್ತಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಇದೀಗ ಅವರ ಸಹೋದರ ಶೌವಿಕ್ ಚಕ್ರವರ್ತಿಗೆ ವಿಶೇಷ ನ್ಯಾಯಾಲಯ ಜಾಮೀನು ಪ್ರಕಟಿಸಿದೆ.
ಸೆಪ್ಟೆಂಬರ್ 4ರಂದು ನಟ ಸುಶಾಂತ್ ಸಿಂಗ್ ರಜಪೂತ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಜೊತೆಗೆ ಶೌವಿಕ್ ಚಕ್ರವರ್ತಿಯನ್ನು ಬಂಧಿಸಲಾಗಿತ್ತು. ಬಳಿಕ ಇಬ್ಬರನ್ನೂ ಎನ್‍ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಜೂನ್‍ನಲ್ಲಿ ಸುಶಾಂತ್ ಸಿಂಗ್ ಸಾವಿನ ಸುತ್ತ ಡ್ರಗ್ಸ್ ಸೇವನೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಎನ್‍ಸಿಬಿ ವಿವಿಧ ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಿಸಿತ್ತು.
ಮುಂಬೈ ಕೋರ್ಟ್ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಎನ್‍ಸಿಬಿ ಅಧಿಕಾಗಳ ಮುಂದೆ ಹೇಳಿಕೆ ನೀಡಿರುವುದು ಹಾಗೂ ತಪ್ಪೊಪ್ಪಿಕೊಂಡಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಚಕ್ರವರ್ತಿ ನವೆಂಬರ್ ಮೊದಲ ವಾರದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ ನಲ್ಲಿ ಶೌವಿಕ್ ಚಕ್ರವರ್ತಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿತ್ತು. ಆದರೆ ಈ ವೇಳೆ ಸಹೋದರಿ, ನಟಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಲಾಗಿತ್ತು.