ನವದೆಹಲಿ: ಕೊರೊನಾ ಸಂಕಷ್ಟದ ನಡುವೆ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಈಗ ನಾಯಕತ್ವದ ಪ್ರಶ್ನೆ ಸೃಷ್ಟಿಯಾಗಿದೆ. ಅಗಸ್ಟ್ ವೇಳೆಗೆ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಮುಂದಿನ ನಾಯಕ ಯಾರು ಎನ್ನುವ ಚರ್ಚೆ ಕಾಂಗ್ರೆಸ್ ನಾಯಕರಲ್ಲಿ ಶುರುವಾಗಿದೆ.
ಕಾಂಗ್ರೆಸ್ ವಲಯದಲ್ಲಿ ಹಲವು ಬಣಗಳು ಸೃಷ್ಟಿಯಾಗಿದ್ದು ಈ ಪೈಕಿ ಒಂದು ಬಣ ರಾಹುಲ್ ಗಾಂಧಿ ಮರು ಆಯ್ಕೆಗೆ ಒತ್ತಾಯಿಸುತ್ತಿದೆ. ಮತ್ತೊಂದು ಬಣ ಸಂಕಷ್ಟ ಕಾಲದಲ್ಲಿ ಸೋನಿಯಾ ಗಾಂಧಿ ಅವರೇ ಪಕ್ಷದ ನೇತೃತ್ವದ ವಹಿಸಿಕೊಳ್ಳಲ್ಲಿ ಎನ್ನುವ ವಾದ ಮುಂದಿಟ್ಟಿದ್ದು ಮತ್ತೊಂದಿಷ್ಟು ನಾಯಕರು ಸಿಡಬ್ಲುಸಿ ಚುನಾವಣೆ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭೆ ಚುನಾವಣೆ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜೀನಾಮೆ ನೀಡಿ ಬಳಿಕ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಒಂದು ವರ್ಷವಾಗಿದೆ. ರಾಹುಲ್ ಗಾಂಧಿ ಜವಬ್ದಾರಿ ವಹಿಸಿಕೊಳ್ಳುವ ಬಗ್ಗೆ ಯಾವುದೇ ಸ್ಪಷ್ಟ ನಿಲುವುಗಳು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಮುಂದಿನ ನಾಯಕರು ಯಾರು ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಕೊರೊನಾ ಸಮಸ್ಯೆ, ಆರ್ಥಿಕ ಹಿನ್ನಡೆ, ಗಡಿ ವಿಚಾರ ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದು, ಬಿಹಾರ ಚುನಾವಣೆ ಸಮೀಪವಾಗುತ್ತಿರುವ ಕಾರಣ ಬಲವಾದ ನಾಯಕತ್ವ ಪಕ್ಷಕ್ಕೆ ಬೇಕಿದೆ ಎಂದು ಹಲವು ನಾಯಕರು ಒತ್ತಾಯಿಸುತ್ತಿದ್ದಾರೆ.