KarnatakaKodaguLatestMain Post

ರಾಷ್ಟ್ರಪತಿಗಳಿಂದ ನಾಳೆ ತಲಕಾವೇರಿಯಲ್ಲಿ ಪೂಜೆ- ಮಂಜಿನ ನಗರಿ ಸಜ್ಜು

– ಜನರಲ್ ತಿಮ್ಮಯ್ಯರ ಸನ್ನಿಸೈಡ್ ಮ್ಯೂಸಿಯಂ ಉದ್ಘಾಟಿಸಲಿರುವ ಕೋವಿಂದ್

ಮಡಿಕೇರಿ: ಸೇನೆಯ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಸನ್ನಿಸೈಡ್ ಮ್ಯೂಸಿಯಂ ಉದ್ಘಾಟನೆಗೆ ಮಡಿಕೇರಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಸ್ವಕುಟುಂಬ ಸಮೇತರಾಗಿ ನಾಳೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಈಗಾಗಲೇ ತಲಕಾವೇರಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದು, ತಲಕಾವೇರಿಯ ಹೆಬ್ಬಾಗಿಲಿನಲ್ಲೇ ಸೇನೆ ಬಿಡಾರಗಳನ್ನು ಹಾಕಿ ಹೈ ಅಲರ್ಟ್ ಆಗಿದೆ. ತಲಕಾವೇರಿಯ ಎಲ್ಲಡೆ ರೆಡ್ ಕಾರ್ಪೆಟ್ ಹಾಕಿ ಸಿದ್ಧಗೊಳಿಸಲಾಗಿದೆ. ಬಾಗಮಂಡಲ ಸಮೀಪದ ಚೆಟ್ಟಿಮಾನಿಯಲ್ಲಿ ಸಿದ್ಧಗೊಂಡಿರುವ ಹೆಲಿಪ್ಯಾಡ್ ನಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ರಾಮನಾಥ್ ಕೋವಿಂದ್ ಅವರು ಇಳಿಯಲಿದ್ದಾರೆ. ಬಳಿಕ ಕಾರಿನ ಮೂಲಕ ತಲಕಾವೇರಿಗೆ ತೆರಳಿಲಿದ್ದು, 12:30ರ ವರೆಗೆ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ.

ನಾಳೆ ಬೆಳಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಬಾಗಮಂಡಲದಿಂದ ತಲಕಾವೇರಿಯವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಪೊಲೀಸ್, ಸೇನಾಧಿಕಾರಿಗಳು, ಅಗ್ನಿಶಾಮಕ ದಳ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ರೂಟ್ ಮಾರ್ಚ್ ಮಾಡಿ ಪೂರ್ವ ತಯಾರಿ ನಡೆಸಿದ್ದಾರೆ.

ಸೇನೆಯ ಅತ್ಯುನ್ನತ್ತ ಹುದ್ದೆಯನ್ನು ಅಲಂಕರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತ್ತಿಸಿಕೊಂಡಿದ್ದ ಕೊಡಗಿನ ಕೆ.ಎಸ್.ತಿಮ್ಮಯ್ಯ ಅವರ ಸನ್ನಿಸೈಡ್ ಮ್ಯೂಸಿಯಂ ಅನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಳೆ ಉದ್ಘಾಟಿಸಲಿದ್ದಾರೆ. ಮ್ಯೂಸಿಯಂ ಈಗಾಗಲೇ ಸಂಪೂರ್ಣ ಸಿದ್ಧಗೊಂಡಿದೆ. ಯುದ್ಧಟ್ಯಾಂಕರ್, ಸೂಪರ್ ಸಾನಿಕ್ ಯುದ್ಧವಿಮಾನ ಮುಂತಾದವುಗಳನ್ನು ಅಂತಿಮವಾಗಿ ಸಿದ್ಧಗೊಳಿಸಲಾಗುತ್ತಿದೆ.

ಇಡೀ ಮ್ಯೂಸಿಯಂ ಸಿಂಗಾರಗೊಂಡಿದ್ದು, ವೈಮಾನಿಕ ದೃಶ್ಯವನ್ನು ನೀವೂ ಕಣ್ತುಂಬಿಕೊಳ್ಳಬಹುದು. ಯುದ್ಧ ಸ್ಮಾರಕ ಮತ್ತು ಮ್ಯೂಸಿಯಂ ಒಳಗೆ ಹಾಗೂ ಹೊರಗೆ ಸಂಪೂರ್ಣ ಸೈನಿಕರು ಮತ್ತು ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮ್ಯೂಸಿಯಂ ಒಳಗೆ ಈಗಾಗಲೇ ಡಾಗ್ ಸ್ಕ್ವಾಡ್ ಕೂಡ ಪರಿಶೀಲನೆ ನಡೆಸಿದ್ದು, ಮ್ಯೂಸಿಯಂ ಮತ್ತು ಯುದ್ಧ ಸ್ಮಾರಕ ಸೇರಿದಂತೆ ಎಲ್ಲೆಡೆ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ. ಸಂಪೂರ್ಣ ಪೊಲೀಸ್ ಮತ್ತು ಸೈನಿಕರ ಹಿಡಿತದಲ್ಲಿದೆ.

ನಾಳೆ ಮಧ್ಯಾಹ್ನ ಒಂದು ಗಂಟೆಗೆ ಮಡಿಕೇರಿಯ ಎಫ್‍ಎಂಸಿ ಕಾಲೇಜು ಮೈದಾನದಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್ ಗೆ ಬರಲಿರುವ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಲ್ಲಿಂದ ಆರ್ಮಿ ಕ್ಯಾಂಟೀನ್, ಎಲ್‍ಐಸಿ ರಸ್ತೆ ರಾಜಾಸೀಟ್ ರಸ್ತೆ ಮತ್ತು ಈಸ್ಟ್ ಎಂಡ್ ಹೊಟೇಲ್ ರಸ್ತೆ ಮೂಲಕ ಸುದರ್ಶನ್ ಗೆಸ್ಟ್ ಹೌಸ್ ಗೆ ತೆರಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ತಿಮ್ಮಯ್ಯ ಮ್ಯೂಸಿಯಂಗೆ ಆಗಮಿಸಲಿರುವ ರಾಮನಾಥ್ ಕೋವಿಂದ್, 45 ನಿಮಿಷಗಳ ಕಾಲ ಮ್ಯೂಸಿಯಂನಲ್ಲೇ ಇರಲಿದ್ದಾರೆ. ಬಳಿಕ ವಾಪಸ್ ಬೆಂಗಳೂರಿಗೆ ತೆರಳಲಿದ್ದಾರೆ.

Leave a Reply

Your email address will not be published.

Back to top button