ರಾಜ್ಯ ಸರ್ಕಾರ ನೀಡಿರುವ ಲೀಗಲ್ ನೋಟಿಸ್‍ಗೆ ದಾಖಲೆ ಸಮೇತ ಉತ್ತರಿಸುತ್ತೇವೆ: ಡಿಕೆಶಿ

– ಕೊರೊನಾ ಹೆಣದಲ್ಲಿ ರಾಜ್ಯ ಸರ್ಕಾರ ಹಣ ಮಾಡುತ್ತಿದೆ

ಮಂಗಳೂರು: ಸರ್ಕಾರ ಕೊರೊನಾ ಹೆಣಗಳ ಮೇಲೆ ಹಣ ಮಾಡಿದೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕೊರೊನಾದ ಹೆಸರಿನಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದ್ದು, 4 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಎರಡು ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಲೂಟಿ ಮಾಡಿದೆ ಎಂದು ವಾಗ್ದಾಳಿ ಮಾಡಿದರು.

- Advertisement -

ಇದೇ ವೇಳೆ ಬಿಜೆಪಿ ನೀಡಿರುವ ಲೀಗಲ್ ನೋಟಿಸ್ ಪ್ರತಿಕ್ರಿಯಿಸಿ, ಸರ್ಕಾರದ ಎಲ್ಲ ನೋಟಿಸ್‍ಗೆ ಉತ್ತರ ನೀಡಲು ಸಿದ್ಧವಿದ್ದೇವೆ. ಹಗರಣ ನಡೆದಿದೆ ಅನ್ನೋದಕ್ಕೆ ಎಲ್ಲ ದಾಖಲೆಗಳಿವೆ. ಈ ಹಗರಣದ ತನಿಖೆಯನ್ನು ನ್ಯಾಯಾಧೀಶರು ವಿಚಾರಣೆ ಮಾಡಬೇಕು. ಎಲ್ಲಾ ಖರೀದಿ ಪ್ರಕ್ರಿಯೆ ಬಗ್ಗೆಯೂ ತನಿಖೆಯಾಗಲಿ. ನಾನು ಏನು ಮಾಡಿದ್ದೇನೆ ಎಂಬುವುದರ ಬಗ್ಗೆಯೂ ತನಿಖೆಯಾಗಲಿ. ನನ್ನ ಮೇಲೆ ಇಡಿ, ಸಿಒಡಿ, ಸಿಬಿಐ ತನಿಖೆ ಮಾಡಿದರು. ಈಗ ಗಲ್ಲು ಹಾಕೋಕೆ ಹೊರಟಿದ್ದಾರೆ. ನಾನು ಹೇಳಿದ್ದು ತಪ್ಪಾಗಿದ್ದರೆ ಸರ್ಕಾರ ನನ್ನನ್ನು ಗಲ್ಲಿಗೇರಿಸಲಿ ಎಂದು ಸವಾಲ್ ಹಾಕಿದ್ದಾರೆ.

- Advertisement -

ಸರ್ಕಾರ ನನಗೆ ಲೀಗಲ್ ನೋಟಿಸ್ ಕಳಿಸಿದೆ. ನಾನು ಅದಕ್ಕೆ ಸರಿಯಾದ ಉತ್ತರ ಕೊಡುತ್ತೇನೆ. ನಮ್ಮಲ್ಲಿ ಬೇಕಾದ ಎಲ್ಲ ದಾಖಲೆಗಳು ಇದೆ ಎಂದು ಪ್ರತಿಕ್ರಿಯಿಸಿದ್ದಾರೆ. ಕಳೆದ ವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಕೊರೊನಾ ಹೆಸರಿನಲ್ಲಿ ರಾಜ್ಯ ಸರ್ಕಾರ 2 ಸಾವಿರ ಕೋಟಿಯನ್ನು ಲೂಟಿ ಮಾಡಿದೆ ಎಂದು ದಾಖಲೆ ಬಿಡುಗಡೆ ಮಾಡುವ ಮೂಲಕ ಆರೋಪ ಮಾಡಿದ್ದರು.

- Advertisement -