Connect with us

Karnataka

ರಾಜ್ಯ ಬಿಜೆಪಿಯಲ್ಲಿ ಯತ್ನಾಳ್‍ಗಿಂತಲೂ ಅನೇಕ ಹಿರಿಯರಿದ್ದಾರೆ- ಆಯನೂರು ಮಂಜುನಾಥ್ ತಿರುಗೇಟು

Published

on

– ಯತ್ನಾಳ್ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು
– ಯತ್ನಾಳ್ ಪಕ್ಷ ಕಟ್ಟಿರುವುದು ರಾಜ್ಯದಲ್ಲಲ್ಲ, ಅವರ ಊರಿನಲ್ಲಿ

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಮಾತನಾಡಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಮ್ಮ 78ರ ಹರೆಯದಲ್ಲೂ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ತರಲು ಯುವಕರು ನಾಚಿಸುವಂತೆ ಓಡಾಡಿ ಬಡವರ, ಕಾರ್ಮಿಕರ ಮತ್ತು ಕೊರೊನಾ ಬಾಧಿತರ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಅಲ್ಲದೆ ಉತ್ತಮ ಕೆಲಸ ಮಾಡಿದ್ದಾರೆ. ಕೊರೊನಾ ವೇಳೆ ರಾಜ್ಯದ ಜನರಲ್ಲಿ ಭರವಸೆ ಮೂಡಿಸುತ್ತಿರುವ ಇಂತಹ ಸಂದರ್ಭದಲ್ಲಿ ಕೇವಲ ನೆಗೆಟಿವ್ ಪ್ರಚಾರದ ಗೀಳಿಗಾಗಿ ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರದ್ದು ಹದ್ದುಮೀರಿದ್ದ ಕಿಡಗೇಡಿತನದ ಹೇಳಿಕೆ ಎಂದು ಕಿಡಿ ಕಾರಿದ್ದಾರೆ.

ಶಾಸಕನಾಗಿ ಹೇಳಿಕೆ ನೀಡುವ ಸ್ವಾತಂತ್ರ್ಯ ಅವರಿಗೆ ಇದ್ದರೂ, ಅದಕ್ಕೆ ಇತಿಮಿತಿ ಇದೆ. ಪಕ್ಷದ ವರ್ಚಸ್ಸಿಗೆ ಅದರಿಂದ ಹಾನಿಯಾಗಬಾರದು. ಪಕ್ಷದ ಚೌಕಟ್ಟು ಮೀರಿದ ಯಾರೇ ಆದರೂ ಪಕ್ಷದ ಶಿಸ್ತು ಕ್ರಮಕ್ಕೆ ಬದ್ಧವಾಗಿರಬೇಕು. ಯತ್ನಾಳ್ ಅವರಿಗಿಂತ ಪಕ್ಷದಲ್ಲಿ ಹಿರಿಯನಾಗಿ ಒಂದು ವರ್ಷ ಕಾಲ ಜೈಲು ಶಿಕ್ಷೆ ಅನುಭವಿಸಿದ ನಾನೂ ಇದ್ದೇನೆ. ಇನ್ನು ಅನೇಕ ಹಿರಿಯ ನಾಯಕರಿದ್ದಾರೆ. ಅವರು ಯಾರು ಅಧಿಕಾರ ದಾಹಕ್ಕಾಗಿ ಸಭ್ಯತೆ ಮೀರಿಲ್ಲ. ನಾನೇ ಪಕ್ಷದಲ್ಲಿ 5ನೇ ಹಿರಿಯ ಎಂಬ ಭ್ರಮೆಯಿಂದ ಹೊರಗೆ ಬನ್ನಿ ವಿವಾದಾತ್ಮಕ ಹೇಳಿಕೆ ನೀಡಿ ಋಣಾತ್ಮಕ ಪ್ರಚಾರಕ್ಕೆ ಹಾತೊರೆಯಬೇಡಿ. ಬಿ.ಎಸ್.ವೈ. ಸರ್ವಮಾನ್ಯ ನಾಯಕರು. ಯತ್ನಾಳ್ ರಂತಹವರಿಂದ ಬಿ.ಎಸ್.ವೈ. ಬೆಳೆದಿಲ್ಲ ಎಂದು ಕುಟುಕಿದ್ದಾರೆ.

ಉಮೇಶ್ ಕತ್ತಿಯವರು ಸಹ 8 ಬಾರಿ ಶಾಸಕರಾಗಿದ್ದು, ಅವರಿಗೆ ಎಲ್ಲ ಅರ್ಹತೆ ಇದೆ. ಆದರೆ ಅವರ ಬಾಯಿಂದಲೂ ಬಿ.ಎಸ್.ವೈ. ನಮ್ಮ ನಾಯಕರಲ್ಲ ಎಂಬ ಹೇಳಿಕೆ ಬಂದಿಲ್ಲ. ಊಟದಲ್ಲಿ ಭಾಗವಹಿಸಿ ಹೊರಗೆ ಬಂದ ಮೇಲೆ ಮಾಧ್ಯಮದವರನ್ನು ಕಂಡು ಪ್ರಚಾರಕ್ಕಾಗಿ ಯತ್ನಾಳ್ ಅಂತಹವರು ನೀಡುವ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಲ್ಲದೆ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಗಮನ ಹರಿಸಿ ತುರ್ತಾಗಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *