– ವರಿಷ್ಠರ ಭೇಟಿಗೆ ಮೂಲ, ವಲಸಿಗರಿಂದ ಸರ್ಕಸ್
– ಆಪ್ತೇಷ್ಠರ ಸಭೆ ರದ್ದುಗೊಳಿಸಿದ ಸಿಎಂ
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪಕ್ಕಾ ಆಗುತ್ತಿದ್ದಂತೆ, ಮೂಲ ಬಿಜೆಪಿಗರು ತಕರಾರು ಎತ್ತಿದ್ದಂತೆ ಕಾಣುತ್ತಿದೆ. ನಿನ್ನೆಯಷ್ಟೆ 17 ಮಂದಿಯಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. 105 ಶಾಸಕರಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಗುಂಪು ರಾಜಕೀಯ ಶುರುವಾಗಿದೆ.
ಶಾಸಕರಾದ ಮುನಿರತ್ನ, ಉಮೇಶ್ ಕತ್ತಿ, ಮೇಲ್ಮನೆ ಸದಸ್ಯರಾದ ಆರ್. ಶಂಕರ್, ಸಿ.ಪಿ. ಯೋಗೇಶ್ವರ್, ಎಂಟಿಬಿ ನಾಗರಾಜ್ ಸಚಿವರಾಗುವುದು ಪಕ್ಕಾ ಆಗುತ್ತಿದ್ದಂತೆ, ದೆಹಲಿಯಲ್ಲಿ ಲಾಬಿ ಶುರುವಾಗಿದೆ.
Advertisement
ಶುಕ್ರವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಚೇರಿ ಪೂಜೆ ನೆಪದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆರ್. ಅಶೋಕ್ ದೆಹಲಿಗೆ ಹಾರಿದ್ದಾರೆ. ಬಿಜೆಪಿ ವರಿಷ್ಠ ಜೆ.ಪಿ. ನಡ್ಡಾ ಕೂಡ ನಾಳಿನ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಅಲ್ಲಿ ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ.
Advertisement
Advertisement
ಇನ್ನೊಂದೆಡೆ, ವಲಸಿಗ ತಂಡದ ಅಧಿನಾಯಕರಂತೆ ಬಿಂಬಿಸಿಕೊಂಡಿರುವ ಸಚಿವ ರಮೇಶ್ ಜಾರಕಿಹೊಳಿ, ಸರ್ಕಾರ ರಚನೆಗೆ ಕಾರಣರಾದವರ ಪರ ನಿಂತಿದ್ದಾರೆ. ಜೆ.ಪಿ. ನಡ್ಡಾ ಭೇಟಿಗೆ ದಿನವಿಡಿ ಕಾದಿರುವ ಜಾರಕಿಹೊಳಿಗೆ ಇನ್ನೂ ಬುಲಾವ್ ಸಿಕ್ಕಿಲ್ಲ. ಒಂದು ವೇಳೆ ಶ್ರೀಮಂತ ಪಾಟೀಲ್ರನ್ನು ಸಂಪುಟದಿಂದ ಕೈಬಿಟ್ಟರೆ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮುಂದೆ ಪ್ರಸ್ತಾಪ ಮುಂದಿಡಲು ಬಯಸಿದ್ದಾರೆ ಎನ್ನಲಾಗಿದೆ.
Advertisement
ಇನ್ನೊಂದೆಡೆ, ಸಿ.ಪಿ. ಯೋಗೇಶ್ವರ್ ಅವರನ್ನು ದಿಢೀರನೆ ದೆಹಲಿಗೂ ಕರೆಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಇವತ್ತು ಆಪ್ತೇಷ್ಠ ಸಚಿವರ ಸಭೆ ಕರೆದಿದ್ದ ಸಿಎಂ ಯಡಿಯೂರಪ್ಪ, ಚಾಮರಾಜನಗರದಿಂದ ಬರೋದು ತಡವಾಗಿದ್ದರಿಂದ ಕೊನೆ ಕ್ಷಣದಲ್ಲಿ ಸಭೆ ರದ್ದುಗೊಳಿಸಿದ್ದಾರೆ. ಆದರೆ ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ,ಜೆ.ಸಿ. ಮಾಧುಸ್ವಾಮಿ, ಬಿ.ಸಿ.ಪಾಟೀಲ್ ಸೇರಿ ಹಲವರು ಸಂಜೆ ಸಿಎಂ ಭೇಟಿ ಮಾಡಿದರು.
ಕ್ಯಾಬಿನೆಟ್ ಸಭೆ:
ಸಂಪುಟ ವಿಸ್ತರಣೆಯ ಗೊಂದಲದ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ಸಂಪುಟ ಸಭೆ ಕರೆದಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಆರ್. ಅಶೋಕ್ ಹಾಗೂ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಇರುವ ಕಾರಣ ನಾಳಿನ ಸಭೆಯಲ್ಲಿ ಭಾಗಿಯಾಗೋದು ಅನುಮಾನವಾಗಿದೆ. ನಾಳೆ ಸಂಪುಟ ಸಭೆ ಬಳಿಕ ಸಿಎಂ ಯಡಿಯೂರಪ್ಪ ಖುದ್ದಾಗಿ ಸುದ್ದಿ ನಡೆಸಲಿದ್ದು, ಏನ್ ಹೇಳ್ತಾರೋ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.
ಈ ಬೆಳವಣಿಗೆಗಳ ಮಧ್ಯೆ, ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಸಚಿವೆ ಶಶಿಕಲಾ ಜೊಲ್ಲೆ, ನಾನ್ಯಾಕೆ ಸಚಿವೆ ಸ್ಥಾನ ತ್ಯಾಗ ಮಾಡಲಿ. ಸಂಪುಟದಲ್ಲಿ ಇರೋದು ನಾನೊಬ್ಬಳೇ ಸಚಿವೆ ಅಂತ ಸೆಡ್ಡು ಹೊಡೆದಿದ್ದಾರೆ. ನಿನ್ನೆಯಷ್ಟೇ ಸುತ್ತೂರು ಶ್ರೀಗಳ ಎದುರು ಸಿಎಂ ಯಡಿಯೂರಪ್ಪ ವಿರುದ್ಧ ಸಂಸದ ಶ್ರೀನಿವಾಸ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶ್ರೀನಿವಾಸ್ ಪ್ರಸಾದ್ ಅಳಿಯ ಹಾಗೂ ನಂಜನಗೂಡು ಶಾಸಕ ಹರ್ಷವರ್ಧನ್, ಮೈಸೂರು ಭಾಗದ ದಲಿತ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು ಅಂತಾ ಆಗ್ರಹಿಸಿದ್ದಾರೆ. ಇವೆಲ್ಲದರ ಮಧ್ಯೆ, ನಾಳೆ ಸಂಸದರ ಅನೌಪಚಾರಿಕ ಸಭೆಯನ್ನು ಸಿಎಂ ಕರೆದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರೇಣುಕಾಚಾರ್ಯ ಯೂಟರ್ನ್:
ಬಿಜೆಪಿಯಲ್ಲಿ ಮೂಲ-ವಲಸಿಗ ಫೈಟ್ಗೆ ತೇಪೆ ಹಚ್ಚುವ ಕೆಲಸ ನಡೆದಿದೆ. ನಿನ್ನೆ ಮಿತ್ರಮಂಡಳಿ ವಿರುದ್ಧ ಹೇಳಿಕೆ ನೀಡಿದ್ದ ಮಾಜಿ ಮಂತ್ರಿ ರೇಣುಕಾಚಾರ್ಯ ಇವತ್ತು ಉಲ್ಟಾ ಹೊಡೆದಿದ್ದಾರೆ. 17 ಜನರ ಬಗ್ಗೆ ನಾನು ಎಲ್ಲೂ ಮಾತಾಡಿಲ್ಲ. ಅವರಿಗೆ ಅಧಿಕಾರ ಕೊಟ್ಟಿದ್ದನ್ನು ಪ್ರಶ್ನೆ ಮಾಡಿಲ್ಲ. ಈ ಬಗ್ಗೆ ಗೊಂದಲ ಬೇಡ ಎಂದಿದ್ದಾರೆ. ಹಾಸನದಲ್ಲಿ ಮಾತನಾಡಿದ ಸಚಿವ ಗೋಪಾಲಯ್ಯ, ಬಿಜೆಪಿಯಲ್ಲಿ ಮೂಲ ವಲಸಿಗ ಅಂತಾ ಏನಿಲ್ಲ. ಬಿಜೆಪಿಯವರು ನಾವೆಲ್ಲಾ ಒಂದೇ ಎಂದಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತ್ರ, ರಮೇಶ್ ಜಾರಕಿಹೊಳಿ ಮನೆಯಲ್ಲಿ ಒಂದು ಕಡೆ, ಇನ್ನೊಬ್ಬರ ಮನೆಯಲ್ಲಿ ಮತ್ತೊಂದು ಮೀಟಂಗ್ ನಡೆಯುತ್ತಲ್ಲಾ ಇದಕ್ಕೆ ಏನಂತಾರೆ ಅಂತಾ ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಬಿಜೆಪಿಯಲ್ಲಿ ಮೂಲ ವಲಸಿಗ ಎಂಬ ಹೊಗೆ ಆಡ್ತಿದೆ. ಇದು ಹೀಗೆ ಮುಂದುವರಿದರೆ ಯಡಿಯೂರಪ್ಪ ಖಂಡಿತ ಇನ್ನೊಂದು ಉಪ ಚುನಾವಣೆಯವರೆಗೆ ಸಿಎಂ ಕುರ್ಚಿಯಲಿ ಉಳಿಯಲ್ಲ ಎಂದು ಭವಿಷ್ಯ ನುಡಿದಿದ್ದಾರೆ.