LatestMain PostNational

ರಾಜ್ಯಸಭಾ ಸದಸ್ಯರಾಗಿ ದೇವೇಗೌಡರು ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಮತ್ತು ಜಾತ್ಯಾತೀತ ಜೆಡಿಎಸ್ ಮುಖ್ಯಸ್ಥ ಎಚ್.ಡಿ.ದೇವೇಗೌಡ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಸಂಸತ್‍ನ ಮುಂಗಾರು ಅಧಿವೇಶನ ಭಾನುವಾರ ಕೂಡ ನಡೆಯುತ್ತಿದೆ. ಹೀಗಾಗಿ ದೇವೇಗೌಡರು ಶನಿವಾರ ರಾತ್ರಿಯೇ ದೆಹಲಿಗೆ ಹೋಗಿದ್ದರು. ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ರಾಜ್ಯಸಭೆ ಸಭಾಧ್ಯಕ್ಷ ವೆಂಕಯ್ಯನಾಯ್ಡು ಸಮ್ಮುಖದಲ್ಲಿ ಎಚ್.ಡಿ.ದೇವೇಗೌಡ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ರಾಜ್ಯಸಭೆ ಸದಸ್ಯರಾದ ಬಳಿಕ ಇದೇ ಮೊದಲ ಬಾರಿ ದೇವೇಗೌಡರು ಕಲಾಪಕ್ಕೆ ಹಾಜರಾಗಿದ್ದಾರೆ. ದೇವೇಗೌಡರು 24 ವರ್ಷಗಳ ಬಳಿಕ ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದಾರೆ. ಈ ಹಿಂದೆ ಪ್ರಧಾನ ಮಂತ್ರಿಯಾಗಿದ್ದ ವೇಳೆ ಅವರು ಮೇಲ್ಮನೆಗೆ ಆಯ್ಕೆಯಾಗಿದ್ದರು.

ರಾಜ್ಯಸಭೆಯಲ್ಲಿ ತೆರವಾದ ನಾಲ್ಕು ಸ್ಥಾನಗಳಿಗಾಗಿ ಜೂನ್ 12ರಂದು ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ದೇವೇಗೌಡರು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. 61 ಹೊಸ ಸದಸ್ಯರಲ್ಲಿ 45 ಮಂದಿ ಜುಲೈ 22 ರಂದು ಸಂಸತ್ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.

ಕೊರೊನಾ ಹಿನ್ನೆಲೆ ಹಿರಿಯ ನಾಗರಿಕರಿಗೆ ಪ್ರಯಾಣಿಸಲು ಕೋವಿಡ್ ಪ್ರೇರಿತ ನಿರ್ಬಂಧಗಳಿಂದಾಗಿ ಆಗ ದೇವೇಗೌರಡು ನವದೆಹಲಿಗೆ ಹೋಗಲು ಸಾಧ್ಯವಾಗಲಿಲ್ಲ. ಇದೀಗ ವೈದ್ಯರ ಸಲಹೆಯ ಮೇರೆಗೆ ದೇವೇಗೌಡರು ತಮ್ಮ ಪತ್ನಿ ಚೆನ್ನಮ್ಮ ಅವರೊಂದಿಗೆ ದೆಹಲಿಗೆ ಹೋಗಿದ್ದು, ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶನಿವಾರ ಹಿಂದಿ ಹೇರಿಕೆಯ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ ಸಂಸತ್‍ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಲೋಕಸಭೆ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದೆ ಸುಮಲತಾ, ಹಿಂದಿ ಹೇರಿಕೆಯಿಂದ ಪ್ರಾದೇಶಿಕ ಭಾಷೆಗಳಿಗೆ ಹಾನಿ ಉಂಟಾಗಲಿದೆ. ಹೀಗಾಗಿ ಹಿಂದಿ ಹೇರಿಕೆಯನ್ನು ಕನ್ನಡಿಗರಾದ ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಜನರ ಭಾವನೆಯೂ ಇದೆ ಆಗಿದೆ. ಕೇಂದ್ರ ಸರ್ಕಾರ, ತ್ರಿಭಾಷ ಸೂತ್ರದ ಜಾರಿ ವಿಚಾರದಲ್ಲಿ ಪುನರ್‍ವಿಮರ್ಷೆ ಮಾಡಿಕೊಳ್ಳಬೇಕು ಎಂದು ಸುಮಲತಾ ಅಂಬರೀಶ್ ಆಗ್ರಹಿಸಿದ್ದರು.

Leave a Reply

Your email address will not be published. Required fields are marked *

Back to top button