ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಅಬ್ಬರ ಮುಂದುವರಿದಿದೆ. ಬಾಗಲಕೋಟೆ ಇಳಕಲ್ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು ಇಳಕಲ್ ಸಂಪರ್ಕಿಸುವ ಕರಡಿ ಗ್ರಾಮದ ರಸ್ತೆಗಳು ಜಲಾವೃತವಾಗಿದೆ. ರಸ್ತೆಯಲ್ಲಿ 2 ಅಡಿಯಷ್ಟು ನೀರು ತುಂಬಿದ್ದು ವಾಹನ ಸವಾರರು ಪರದಾಡಿದ್ರು.
ಗಡಿ ಜಿಲ್ಲೆ ಬೀದರ್ ನಲ್ಲಿ ಭಾರೀ ಮಳೆಯಾಗಿದ್ದು ಔರಾದ್ ತಾಲೂಕಿನ ಹಲವು ಗ್ರಾಮಗಳ ಜಮೀನುಗಳು ಜಲಾವೃತವಾಗಿದೆ. ಸಂತಪೂರ ಹೋಬಳಿಯ ಸೋರಳ್ಳಿ, ಜಂಬಗಿ ಹಲವು ಗ್ರಾಮಗಳ ಹಳ್ಳಕೊಳ್ಳಗಳು, ಕೆರೆಗಳು ಭರ್ತಿಯಾಗಿವೆ. ಹಾವೇರಿಯಲ್ಲೂ ಧಾರಾಕಾರ ಮಳೆಯಾಗಿದ್ದು ಹಾವೇರಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಭಾರೀ ವರ್ಷಧಾರೆಯಾಗಿದೆ.
ಬಳ್ಳಾರಿಯ ಸಂಡೂರು ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಕೊಡಗಿನಲ್ಲಿ ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದಿತ್ತು. ಮಧ್ಯಾಹ್ನದ ಹೊತ್ತಿಗೆ ಜಿಟಿ ಜಿಟಿ ಮಳೆಯಾಯ್ತು.