– ದೇವರ ಬಳಿ ಪ್ರಮಾಣ ಮಾಡಲು ಕೈ ಮುಖಂಡರ ಪಟ್ಟು
– ಎಸ್ವಿ ರಾಮಚಂದ್ರಪ್ಪ ಸೂಚನೆಯಂತೆ ನೆಲಸಮ
ದಾವಣಗೆರೆ: ರಾಜಕೀಯ ದುರುದ್ದೇಶದಿಂದ ಬಿಜೆಪಿ ಶಾಸಕರೊಬ್ಬರು ಕೋಳಿ ಫಾರಂನನ್ನು ಅಕ್ರಮವಾಗಿ ನೆಲಸಮ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ದಾವಣಗೆರೆಯಲ್ಲಿ ಕೇಳಿ ಬಂದಿದೆ.
ಜಿಲ್ಲೆಯ ಜಗಳೂರು ತಾಲೂಕಿನ ಹೀರೇ ಅರಕೆರೆ ಗ್ರಾಮದ ನಿವಾಸಿ ಗುರುಸ್ವಾಮಿ ರಸ್ತೆಗೆ ಹಾಗೂ ಬಸ್ ನಿಲ್ದಾಣಕ್ಕೆ ಜಮೀನು ಬಿಟ್ಟುಕೊಟ್ಟಿದ್ದರು. ಹೀಗಾಗಿ ಅಲ್ಲೇ ಪಕ್ಕದಲ್ಲಿ 2015ರಲ್ಲಿ ತಹಶೀಲ್ದಾರ್ ಅವರ ಅನುಮತಿ ಮೇರೆಗೆ ಕೋಳಿ ಫಾರಂ ಶೆಡ್ ನಿರ್ಮಾಣ ಮಾಡಿದ್ದರು. ಆದರೆ ಈಗ ಶಾಸಕ ಎಸ್ವಿ ರಾಮಚಂದ್ರಪ್ಪ ರಾಜಕೀಯ ದ್ವೇಷದ ಮೇಲೆ ಈ ಶೆಡ್ ಅನ್ನು ಒಡೆಸಿಹಾಕಿದ್ದಾರೆ ಎಂದು ಗುರುಸ್ವಾಮಿ ಆರೋಪ ಮಾಡಿದ್ದಾರೆ.
Advertisement
Advertisement
ಈ ಹಿಂದೆ ಗುರುಸ್ವಾಮಿ ಹಾಗೂ ಎಸ್ವಿ ರಾಮಚಂದ್ರಪ್ಪ ಇಬ್ಬರು ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಈ ಮಧ್ಯೆ ಕಾಂಗ್ರೆಸ್ ಬಿಟ್ಟು ಬಂದ ರಾಮಚಂದ್ರಪ್ಪ ಬಿಜೆಪಿಯಿಂದ ಎಂಎಲ್ಎ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಶಾಸಕರಾದರು. ಇದಾದ ನಂತರ ರಾಮಚಂದ್ರಪ್ಪ ಗುರುಸ್ವಾಮಿಯನ್ನು ನಮ್ಮ ಪಕ್ಷಕ್ಕೆ ಬಾ ಎಂದು ಹೇಳುತ್ತಿದ್ದರಂತೆ. ಇದಕ್ಕೆ ಗುರುಸ್ವಾಮಿ ನಾನು ಬರುವುದಿಲ್ಲ ಎಂದು ಹೇಳಿದ್ದಾರೆ. ಪಕ್ಷ ಸೇರದಿದ್ದಕ್ಕೆ ಕೋಪಗೊಂಡ ಶಾಸಕ ಈ ರೀತಿ ಮಾಡಿದ್ದಾರೆ ಎಂದು ಗುರುಸ್ವಾಮಿ ದೂರಿದ್ದಾರೆ.
Advertisement
Advertisement
ನೋಟಿಸ್ ಕೂಡ ನೀಡದೇ, ಏಕಾಏಕಿ ಜೆಸಿಬಿಯಿಂದ ಶೆಡ್ ಅನ್ನು ತಹಶೀಲ್ದಾರ್ ತಿಮ್ಮಪ್ಪ ನೆಲಸಮ ಮಾಡಿದ್ದಾರೆ. ಈ ವೇಳೆ ಶೆಡ್ ಒಳಗೆ ಇದ್ದ ಮನೆಯ ಸಾಮಗ್ರಿಗಳನ್ನು ತೆಗೆದುಕೊಳ್ಳುತ್ತೇವೆ ಎಂದರೂ ಬಿಡದೇ ಶಾಸಕರಿಂದ ಕರೆ ಮಾಡಿಸಿ ನಾವು ಹಾಗೇ ಬಿಟ್ಟು ಹೋಗುತ್ತೇವೆ ಎಂದು ತಹಶೀಲ್ದಾರ್ ತಿಮ್ಮಪ್ಪ ಹೇಳಿದರು ಎಂದು ಗುರುಸ್ವಾಮಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ರಾಜಕೀಯ ದ್ವೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಶಾಸಕ ರಾಮಚಂದ್ರಪ್ಪ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೊತೆಗೆ ಈ ಕೃತ್ಯದಲ್ಲಿ ಶಾಸಕರ ಪಾತ್ರವಿಲ್ಲದಿದ್ದರೆ ಮಾಯಮ್ಮ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲ್ ಹಾಕಿದ್ದಾರೆ ಹಾಗೂ ಮಂಗಳವಾರ ಮಾಯಮ್ಮ ದೇವಿ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುವಂತೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.