ಮಂಡ್ಯ: ಕೊರೊನಾ ವಿಚಾರದಲ್ಲಿ ಸಾರ್ವಜನಿಕರಿಗೊಂದು, ರಾಜಕಾರಣಿಗಳಿಗೊಂದು ರೂಲ್ಸ್ ನ್ನು ಸರ್ಕಾರ ಮಾಡಬಾರದು. ಎಲ್ಲರಿಗೂ ಒಂದೇ ನಿಯಮ ರೂಪಿಸಿ ಅವುಗಳನ್ನು ಸರಿಯಾಗಿ ಜಾರಿಗೆ ಬರುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಪುಟ್ಟರಾಜು ಆಗ್ರಹಿಸಿದ್ದಾರೆ.
ಜಿಲ್ಲೆಯ ಪಾಂಡವಪುರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೋವಿಡ್ ನಿಯಮಗಳ ವಿಚಾರದಲ್ಲಿ ಜನರಿಗೊಂದು, ರಾಜಕಾರಣಿಗೊಂದು ರೂಲ್ಸ್ ಎಂಬಂತೆ ನಡೆದುಕೊಳ್ಳುತ್ತಿದೆ. ಈ ಧೋರಣೆಯನ್ನು ತೊರೆದು ಎಲ್ಲರಿಗೂ ಒಂದೇ ನಿಯಮ ಜಾರಿಗೆ ತರಬೇಕು. ಮದುವೆ ಸೇರಿದಂತೆ ರಾಜಕೀಯ ಸಮಾವೇಶ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಸೇರುತ್ತಿದ್ದಾರೆ. ಕೇವಲ ಬಾಯಲ್ಲಿ ಮಾತ್ರ ಜನ ಸೇರಬಾರದು ಎಂದು ಹೇಳಿದರೆ ಆಗಲ್ಲ. ಕೊರೊನಾ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
Advertisement
Advertisement
ಈಗಾಗಲೇ ಎರಡನೇ ಅಲೆ ನಾವು ಊಹಿಸಲು ಸಾಧ್ಯವಾಗದ ಮಟ್ಟಿಗೆ ಹರಡುತ್ತಿದೆ. ಮಹಾರಾಷ್ಟ್ರ ನೋಡಿದರೆ ಮೈ ಜುಮ್ ಎನ್ನುತ್ತಿದೆ, ಇದೀಗ ಕರ್ನಾಟಕವು ಅದೇ ಸಾಲಿನಲ್ಲಿ ಹೋಗುತ್ತಿದೆ. ಮುಂದೆ ಏನು ಕೇಡು ಕಾದಿದೆಯೋ ಎನ್ನುವುದು ಗೋತ್ತಾಗುತ್ತಿಲ್ಲ. ಇಷ್ಟಾದರೂ ಜನರಲ್ಲಿ ಭಯ ಮೂಡುತ್ತಿಲ್ಲ. ಸರ್ಕಾರ ಕೊರೊನಾ ನಿಯಮಗಳನ್ನು ಸರಿಯಾಗಿ ಜಾರಿಗೆ ತರುವಲ್ಲಿ ಎಡವಿದರೆ. ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾಗಿ ಅನುಸರಿಸುವಲ್ಲೇ ಬೇಜವಾಬ್ದಾರಿ ತೋರುತ್ತಿದ್ದಾರೆ. ಸರ್ಕಾರ ತನ್ನ ಕೆಲಸವನ್ನು ಸರಿಯಾಗಿ ಮಾಡಬೇಕು. ಅದೇ ರೀತಿ ಸಾರ್ವಜನಿಕರೂ ಸರ್ಕಾರದ ಜೊತೆ ಕೈ ಜೋಡಿಸಿ ಕೊರೊನಾ ವಿರುದ್ಧ ಹೋರಾಡಿ, ಕೊರೊನಾ ಮುಕ್ತರಾಗಬೇಕು ಎಂದರು.