– ನೈತಿಕ ಪೊಲೀಸ್ ಗಿರಿಯ ಎಚ್ಚರಿಕೆ ನೀಡಿದ ಭಜರಂಗದಳ
ಚಿಕ್ಕಮಗಳೂರು: ಮಳ್ಳನಂತೆ ಬಂದು ಹಸುವಿಗೆ ತಿನ್ನಲು ತಿನಿಸು ನೀಡಿ ಅದೇ ಹಸುವನ್ನು ಕದ್ದು ಗಾಡಿಯಲ್ಲಿ ತುಂಬಿಕೊಂಡು ಹೋದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹೊರವಲಯದ ಹುಲ್ಲುಮಕ್ಕಿ ಸ್ವದೇಶಿ ಭಂಡಾರದ ಬಳಿ ನಡೆದಿದೆ.
Advertisement
ಹುಲ್ಲುಮಕ್ಕಿ ಗ್ರಾಮದಲ್ಲಿ ರಸ್ತೆ ಬದಿ ಎರಡು ಹಸುಗಳು ಮಲಗಿದ್ದವು. ಹಸುಗಳು ಮಲಗಿದ್ದ ಜಾಗಕ್ಕೆ ಮಳ್ಳನಂತೆ ಬಂದ ಕಳ್ಳ ಎರಡು ಹಸುಗಳಿಗೂ ತಿನ್ನಲು ಆಹಾರ ಹಾಕಿದ್ದಾನೆ. ಈ ವೇಳೆ ಒಂದು ಹಸುವಿಗೆ ಕೊರಳಿಗೆ ಹಗ್ಗ ಹಾಕಿ ಏಕಾಏಕಿ ಕಾರಿನ ಬಳಿ ಎಳೆದೊಯ್ದು ಕಾರಿಗೆ ತುಂಬಿಕೊಂಡಿದ್ದಾರೆ. ಗೋಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
Advertisement
ಕೊಪ್ಪ ತಾಲೂಕಿನಲ್ಲಿ ಆಗಾಗ್ಗೆ ಗೋ ಕಳ್ಳತನ ವ್ಯಾಪಕವಾಗಿ ನಡೆಯುತ್ತಿದೆ. ಪೊಲೀಸರು ಅಲ್ಲೊಂದು-ಇಲ್ಲೊಂದು ಗೋ ಕಳ್ಳತನ ಪ್ರಕರಣವನ್ನು ಬೇಧಿಸಿದರೂ ಸಂಪೂರ್ಣ ಲಗಾಮು ಬಿದ್ದಿಲ್ಲ. ರೈತರು, ಜನಸಾಮಾನ್ಯರು ರಾಸುಗಳನ್ನ ಸಾಕುವುದೇ ದುಸ್ತರವಾಗಿದೆ. ಜಿಲ್ಲೆಯಲ್ಲಿ ಕೊಟ್ಟಿಗೆಯಲ್ಲಿದ್ದ ಹಸುಗಳನ್ನೂ ಕದ್ದ ಉದಾಹರಣೆಗಳಿವೆ. ಮನೆಯವರಿಗೆ ಗಮನಕ್ಕೆ ಬಂದರೂ ಮಧ್ಯರಾತ್ರಿ ಏನೂ ಮಾಡಲಾಗದ ಸ್ಥಿತಿಯಲ್ಲಿ ಇರುತ್ತಾರೆ. ಯಾಕೆಂದರೆ ಕಳ್ಳತನಕ್ಕೆ ಬಂದವರು ಎಲ್ಲಾ ರೀತಿಯಲ್ಲೂ ಸಿದ್ಧರಾಗೇ ಬಂದಿರುತ್ತಾರೆ. ಹಾಗಾಗಿ, ಮನೆಯವರು ಹೊರಬರಲು ಹೆದರುತ್ತಾರೆ.
Advertisement
Advertisement
ಈ ಕೃತ್ಯವನ್ನು ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆ ತೀವ್ರವಾಗಿ ಖಂಡಿಸಿದೆ. ಭಜರಂಗದಳ ತಾಲೂಕು ಘಟದ ಕಾರ್ಯಕರ್ತರು ಪೊಲೀಸ್ ಇಲಾಖೆ ಗೋ ಕಳ್ಳತನಕ್ಕೆ ಸಂಪೂರ್ಣ ಬ್ರೇಕ್ ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಜರಂಗದಳ ಕಾರ್ಯಕರ್ತರೇ ನೈತಿಕ ಪೊಲೀಸ್ ಗಿರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರಾತ್ರಿ ವೇಳೆ ತಾಲೂಕಿನ ಎಲ್ಲ ಗಡಿಯಲ್ಲೂ ಪೊಲೀಸರು ಸರ್ಪಗಾವಲು ಹಾಕಿ. ಓಡಾಡುವ ಪ್ರತಿಯೊಂದು ಗಾಡಿಯನ್ನೂ ಕೂಲಂಕುಷವಾಗಿ ಪರಿಶೀಲಿಸಿದರೆ ಗೋಕಳ್ಳನಕ್ಕೆ ಸಂಪೂರ್ಣ ಬ್ರೇಕ್ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆಗ್ರಹಿಸಿದ್ದಾರೆ.