ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆಗೆ ಬ್ರೇಕ್ ಹಾಕಲು ಸರ್ಕಾರ ಜನತಾ ಲಾಕ್ಡೌನ್ ಮೊರೆ ಹೋಗಿದೆ. ಆದರೆ ಲಾಕ್ಡೌನ್ ವೇಳೆಯಲ್ಲಿ ರಸ್ತೆಯಲ್ಲಿ ಬೇಕಾಬಿಟ್ಟಿ ಸುಖಾಸುಮ್ಮನೇ ಕುಂಟು ನೆಪ ಹೇಳಿ ಓಡಾಡ್ತಿದ್ದ ಯುವಕರಿಗೆ ಅಧಿಕಾರಿಗಳು ರಸ್ತೆ ಮಧ್ಯೆಯೇ ಬಸ್ಕಿ ಹೊಡೆಸಿ ಮನೆ ಕಳಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಗರದಲ್ಲಿ ನಡೆದಿದೆ.
Advertisement
ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಹಾಗಾಗಿ ಸರ್ಕಾರ ಲಾಕ್ಡೌನ್ ಮಾಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರದ ಕಠಿಣ ನಿಯಮದ ಮಧ್ಯೆಯೂ ನಗರದಲ್ಲಿ ಜನ ಬೇಕಾಬಿಟ್ಟಿ ಓಡಾಡುತ್ತಿದ್ದರು. ಬಳಿಕ ಗಸ್ತು ತಿರುಗುತ್ತಿದ್ದ ಅಧಿಕಾರಿಗಳಿಗೆ ದಾರಿ ಮಧ್ಯೆ ಸಿಕ್ಕಿದ ಯುವಕರಿಗೆ ಅಲ್ಲೇ ಬಸ್ಕಿ ಹೊಡೆಯುವ ಶಿಕ್ಷೆ ನೀಡಿ ಬುದ್ದಿ ಕಲಿಸಿದ್ದಾರೆ.
Advertisement
ನಗರದಲ್ಲಿ ಬೆಳಗ್ಗೆ 10 ಗಂಟೆ ನಂತರ ಜನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ತರಕಾರಿ ಕೊಳ್ಳಲು ಮಾರುಕಟ್ಟೆಗೆ ಬರುತ್ತಿದ್ದ ಜನ ಗುಂಪುಗೂಡುತ್ತಿದ್ದರು. ಇದನ್ನು ತಡೆಯಲು ಈಗಾಗಲೇ ಎಪಿಎಂಸಿ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿ, ಹಣ್ಣು ತರಕಾರಿಯನ್ನು ಗಾಡಿಗಳ ಮೂಲಕ ಮನೆ-ಮನೆಗೆ ಹೋಗಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ ಜನ ಕುಂಟು ನೆಪ ಹೇಳಿಕೊಂಡು ಮನೆಯಿಂದ ಹೊರಗಡೆ ಕಾಲಿಡುವಂತಿಲ್ಲ.
Advertisement
Advertisement
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ನೇತೃತ್ವದ ತಂಡ ಸಿಟಿ ರೌಂಡ್ಸ್ ನಡೆಸುತ್ತಿದ್ದ ವೇಳೆ, ಕುಂಟು ನೆಪ ಹೇಳಿಕೊಂಡು ಹೊರಬರುತ್ತಿದ್ದ ಯುವಕರಿಗೆ ರಸ್ತೆ ಮಧ್ಯೆಯೇ ಬಸ್ಕಿ ಹೊಡಿಸಿ ಮನೆಗೆ ಕಳಿಸಿದ್ದಾರೆ. ಮನೆಯಿಂದ ಹೊರಬಂದರೆ ಬಸ್ಕಿ ಶಿಕ್ಷೆ ಪಕ್ಕಾ ಎಂದು ಎಚ್ಚರಿಸಿದ್ದಾರೆ. ಬಸ್ಕಿ ಹೊಡೆದು ಸುಸ್ತಾಗಿರುವ ಯುವಕರು ಸಾಕಪ್ಪ ಸಾಕು ಮನೆಯಿಂದ ಹೊರಬರುವ ಸಹವಾಸವೇ ಬೇಡ ಅಂತ ಗೋಗರೆದು, ಇನ್ಮುಂದೆ ಬರಲ್ಲ ಸರ್ ಎಂದು ಹೇಳಿ ಹೋಗಿದ್ದಾರೆ.