ರಫೇಲ್ ಆಗಮಿಸಿದ್ದಕ್ಕೆ ಜಿಲೇಬಿ ಹಂಚಿ, ಬೃಹತ್ ಧ್ವಜ ಪ್ರದರ್ಶಿಸಿ ಸಂಭ್ರಮಾಚರಣೆ

ಉಡುಪಿ: ಮೊದಲ ಹಂತದ ರಫೇಲ್ ಯುದ್ಧವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗಿದ್ದು, ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಈ ಸಂಭ್ರಮವನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಿದ್ದು, ಉಡುಪಿಯಲ್ಲಿ ಸಹ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಬುಧವಾರ 5 ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‍ನಿಂದ ಆಗಮಿಸಿದ್ದು, ಅಂಬಾಲ ವಾಯು ನೆಲೆಯಲ್ಲಿ ಲ್ಯಾಂಡ್ ಆಗಿವೆ. ಭರ್ಜರಿಯಾಗಿ ಸ್ವಾಗತಿಸುವ ಮೂಲಕ ರಫೇಲ್ ಯುದ್ಧ ವಿಮಾನಗಳನ್ನು ಬರಮಾಡಿಕೊಳ್ಳಲಾಗಿದೆ. ಇಡೀ ದೇಶದಲ್ಲಿ ಇದೀಗ ಸಂಭ್ರಮ ಮನೆ ಮಾಡಿದ್ದು, ಅದೇ ರೀತಿ ಉಡುಪಿಯಲ್ಲಿ ಸಹ ಸಂಭ್ರಮಾಚರಣೆ ಮಾಡಲಾಗಿದೆ. ಜಿಲ್ಲಾ ನಾಗರೀಕ ಸಮಿತಿ ಬೃಹತ್ ಧ್ವಜ ಪ್ರದರ್ಶನ ಮಾಡಿ, ಬಿಸಿ ಜಿಲೇಬಿ ತಯಾರಿಸಿ ಸಾರ್ವಜನಿಕರಿಗೆ ಹಂಚಿ ಸಂಭ್ರಮಿಸಿದೆ.

- Advertisement -

ಇದರಿಂದಾಗಿ ಉಡುಪಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದಲ್ಲೇ ಅತಿ ದೊಡ್ಡ 20/14 ಅಡಿ ಗಾತ್ರದ ರಾಷ್ಟ್ರಧ್ವಜವನ್ನು ಪ್ರದರ್ಶನ ಮಾಡಿ, ರಫೇಲ್ ಯುದ್ಧ ವಿಮಾನಕ್ಕೆ ಸ್ವಾಗತ ಕೋರಲಾಯಿತು. ನಂತರ ಸ್ಥಳದಲ್ಲೇ ಬಿಸಿ ಜಿಲೇಬಿ ತಯಾರಿಸಿ ಸಾರ್ವಜನಿಕರಿಗೆ ಹಂಚಲಾಯಿತು. ರಫೇಲ್ ಚಿತ್ರ ಹಾಗೂ ಮಾಹಿತಿ ಹೊಂದಿರುವ ಬ್ಯಾನರ್ ಹಿಡಿದು ಸಂಭ್ರಮಾಚರಣೆ ಮಾಡಲಾಯಿತು.

- Advertisement -

ರಫೇಲ್ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ. ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆ.ಜಿ.ತೂಕದ ಈ ವಿಮಾನ 9,500 ಕೆ.ಜಿ. ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮಥ್ರ್ಯ ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.

ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1,800 ಕಿ.ಮೀ ವ್ಯಾಪ್ತಿಯಲ್ಲಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮಥ್ರ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಇದನ್ನೂ ಓದಿ: ಕನಸು ನನಸು.. ಗೇಮ್‌ ಚೇಂಜರ್‌ ರಫೇಲ್‌ ಭಾರತದಲ್ಲಿ ಲ್ಯಾಂಡ್‌

ಭಾರತ ಫ್ರಾನ್ಸ್‍ನ ಡಸಾಲ್ಟ್ ಸಂಸ್ಥೆ ಜೊತೆ ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಖರೀದಿಸುವ ಸಂಬಂಧ ಒಪ್ಪಂದ ನಡೆದಿತ್ತು. ಇದೀಗ ಈ ಪೈಕಿ ಮೊದಲ ಬ್ಯಾಚ್‍ನ ಐದು ವಿಮಾನಗಳು ಸೋಮವಾರ ಫ್ರಾನ್ಸ್‍ನಿಂದ ಟೇಕಾಫ್ ಆಗಿ ಮಂಗಳವಾರ ಯುಎಇಯಲ್ಲಿರುವ ದಫ್ರಾ ವಾಯುನೆಲೆಯಲ್ಲಿ ಲ್ಯಾಂಡ್ ಆಗಿತ್ತು. ಅಲ್ಲಿಂದ ಹೊರಟ ವಿಮಾನ ಈಗ ಭಾರತದಲ್ಲಿ ಲ್ಯಾಂಡ್ ಆಗಿದೆ.

2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್ ವಿಮಾನಗಳನ್ನು(28 ಸಿಂಗಲ್ ಸೀಟರ್, 8 ಡಬಲ್ ಸೀಟರ್) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್‍ನ ಡಸಾಲ್ಟ್ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‍ಲೈನ್ ವಿಧಿಸಲಾಗಿತ್ತು. ಈ ಡೆಡ್‍ಲೈನ್‍ಗೆ ಅನುಗುಣವಾಗಿ ಮೊದಲ ಬ್ಯಾಚ್‍ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್‍ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ. ಎಲ್ಲ ವಿಮಾನಗಳು 2021ರ ಡಿಸೆಂಬರ್ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ.

- Advertisement -