ಬೆಂಗಳೂರು: ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಅವರು ಪ್ರಯತ್ನಿಸಿದರೆ ಯಾವುದು ಅಸಾಧ್ಯವಲ್ಲ ಎಂಬುದು ತಿಳಿದಿರುವ ಸಂಗತಿ. ತುಂಬಾ ಚಿಂತನೆ ಮಾಡಿ ‘ಜ್ಞಾನ ದೀವಿಗೆ’ ಅಭಿಯಾನ ಆರಂಭಿಸಿದ್ದೀರಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಜ್ಞಾನದೀವಿಗೆ ಕಾರ್ಯಕ್ರಮ ಸಂಬಂಧ ಮಾತನಾಡಿದ ಅವರು, ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಡಿಜಿಟಲ್ ಶಿಕ್ಷಣ ಪಡೆಯಲು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅವರು ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ ಎಂದು ಹಾರೈಸಿದರು.
ಈ ಅಭಿಯಾನಕ್ಕೆ ಸರ್ಕಾರದ ಸಂಪೂರ್ಣ ಸಹಕಾರ ಇದೆ. ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ. ನಿಮ್ಮೊಂದಿಗೆ ನಾನು ವೈಯಕ್ತಿಕವಾಗಿ ಸಹ ಮಾತನಾಡುತ್ತೇನೆ. ಈ ಅಭಿಯಾನವನ್ನು ಸಮರ್ಥವಾಗಿ ಜಾರಿಗೆ ತರುವ ಪ್ರಯತ್ನ ಮಾಡೋಣ ಎಂದು ಅಭಯ ನೀಡಿದರು.
ಕೊರೊನಾದಿಂದಾಗಿ ರಾಜ್ಯದ ಆರ್ಥಿಕತೆ ಹಿನ್ನಡೆ ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಹಾಗೆಯೇ ಶಿಕ್ಷಣ ಕ್ಷೇತ್ರದ ಮೇಲೂ ಪರಿಣಾಮ ಬೀರಿದ್ದು, ಪರ್ಯಾಯ ಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ ಆನ್ಲೈನ್ ಶಿಕ್ಷಣ ಕ್ರಮ ಸಹ ಒಂದು. ಆದರೆ ಅಂತರ್ಜಾಲ ಸಮಸ್ಯೆಯಿಂದ ಆನ್ಲೈನ್ ಶಿಕ್ಷಣದಿಂದ ಮಕ್ಕಳು ವಂಚಿತರಾಗಿತ್ತಿದ್ದಾರೆ. ಹೀಗಾಗಿ ಆನ್ಲೈನ್ ಶಿಕ್ಷಣ ವಂಚಿತ ಮಕ್ಕಳಿಗೆ ರೋಟರಿ ಸಂಸ್ಥೆ ಹಾಗೂ ಪಬ್ಲಿಕ್ ಟಿವಿ ‘ಜ್ಞಾನ ದೀವಿ’ಗೆ ಕಾರ್ಯಕ್ರಮದ ಮೂಲಕ ಗ್ರಾಮೀಣ ಮಕ್ಕಳಿಗೆ ಉಚಿತ ಟ್ಯಾಬ್ಗಳನ್ನು ನೀಡಲಾಗುತ್ತಿರುವುದು ಶ್ಲಾಘನೀಯ.
ಇದರಿಂದ ಆನ್ಲೈನ್ ಶಿಕ್ಷಣ ವಂಚಿತ ಮಕ್ಕಳಿಗೆ ಸಹಾಯವಾಗಲಿದೆ. ಪ್ರತಿ ಇಬ್ಬರು ಎಸ್ಎಸ್ಎಲ್ಸಿ ಮಕ್ಕಳಿಗೆ ಒಂದರಂತೆ ಟ್ಯಾಬ್ ವಿತರಿಸುತ್ತಿರುವುದು ಅಭಿನಂದನೀಯ. ಅಂದಾಜು 2.68 ಲಕ್ಷ ಮಕ್ಕಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ರಾಜ್ಯದ ಎಲ್ಲ 30 ಜಿಲ್ಲೆಗಳ ಬಹುತೇಕ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳು ಈ ಅಭಿಯಾನದ ವ್ಯಾಪ್ತಿಗೆ ಬರಲಿವೆ. ಕೊರೊನಾ ನಿರ್ವಹಣೆ ಸಂದರ್ಭದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿವೆ.
ರೋಟರಿ ಸಂಸ್ಥೆ ಹಾಗೂ ಪಬ್ಲಿಕ್ ಟಿವಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಹಮ್ಮಿಕೊಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾಗುತ್ತಿರುವುದು ಶ್ಲಾಘನೀಯ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳು ಕೈ ಜೋಡಿಸುವ ಮೂಲಕ ಸಮಾಜದ ಏಳಿಗೆಗೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.