– ಪ್ರಫುಲ್ 532, ಗಜಾನನ ಹೊಸಬಾಳೆ 663, ಪ್ರಿಯಾಂಕಾ ಕಾಂಬ್ಳೆ 670ನೇ ರ್ಯಾಂಕ್
ಚಿಕ್ಕೋಡಿ: ಯುಪಿಎಸ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಒಬ್ಬ, ಚಿಕ್ಕೋಡಿಯ ಇಬ್ಬರು ಸಾಧನೆ ಮಾಡಿದ್ದು, ರೈತನ ಮಗ, ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವವರ ಮಗ ಹಾಗೂ ಅರಣ್ಯ ಸಿಬ್ಬಂದಿ ಮಗಳು 532, 663 ಹಾಗೂ 670ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
Advertisement
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ರೈತನ ಮಗ, ಅಪ್ಪಟ ಗ್ರಾಮೀಣ ಪ್ರತಿಭೆ ಪ್ರಫುಲ್ ಕೆಂಪಣ್ಣ ದೇಸಾಯಿ ಯುಪಿಎಸ್ಸಿ ಪರೀಕ್ಷೆಯಲ್ಲಿ 532ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಪ್ರಫುಲ್ ದೇಸಾಯಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಹುಬ್ಬಳ್ಳಿಯ ಬಿವಿವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಪದವಿ ಮುಗಿಸಿದ್ದು, ಸದ್ಯ ಜಲಸಂಪನ್ಮೂಲ ಇಲಾಖೆಯಲ್ಲಿ ಅಸಿಸ್ಟಂಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಫುಲ್ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 532ನೇ ರ್ಯಾಂಕ್ ಪಡೆದಿದ್ದಾರೆ. ಪ್ರಫುಲ್ ಅವರ ಸಾಧನೆಗೆ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಕುಟಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
Advertisement
Advertisement
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಯುವಕ ಗಜಾನನ ಬಾಳೆ ಸಹ ಯುಪಿಎಸ್ಸಿ ಪರೀಕ್ಷೆಯಲ್ಲಿ 663ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ. ಯುವಕನ ತಂದೆ ಕಾಗವಾಡ ಪಟ್ಟಣದ ಉಗಾರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ಮಗನಿಗೆ ವಿದ್ಯಾಭ್ಯಾಸ ನೀಡಿ ಸಾಧನೆ ಮಾಡಲು ಸಹಕಾರಿಯಾಗಿದ್ದಾರೆ.
Advertisement
ಬೆಳಗಾವಿಯ ಜಿಐಟಿ ಕಾಲೇಜಿನಲ್ಲಿ ಇ ಆಂಡ್ ಸಿ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿರುವ ಗಜಾನನ, ದೆಹಲಿಯಲ್ಲಿ ಯುಪಿಎಸ್ಸಿ ಪರೀಕ್ಷೆಯ ತರಬೇತಿ ಪಡೆದಿದ್ದರು. 29ನೇ ವಯಸ್ಸಿನಲ್ಲಿ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 663ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಗಜಾನನ ಅವರ ಸಾಧನೆಯಿಂದ ಕುಟಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.
ಅರಣ್ಯ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಪುತ್ರಿ ಸಹ ಯುಪಿಎಸ್ಸಿ ಪರೀಕ್ಷೆಯಲ್ಲಿ 670ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಪ್ರೀಯಾಂಕಾ ವಿಠ್ಠಲ ಕಾಂಬ್ಳೆ, ಸರ್ಕಾರಿ ಶಾಲೆಯಲ್ಲಿ ಓದಿ, ಬಿಎಸ್ಸಿ ಅಗ್ರಿ ಪದವಿ ಮುಗಿಸಿದ್ದಾರೆ. ಪ್ರಿಯಾಂಕಾ ತಂದೆ ಅರಣ್ಯ ಇಲಾಖೆಯ ವಂಟಮೂರಿ ವಲಯದ ಅರಣ್ಯ ರಕ್ಷಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ 6 ತಿಂಗಳು ಸರ್ಕಾರದಿಂದ ನೀಡುವ ಉಚಿತ ಯುಪಿಎಸ್ಸಿ ತರಬೇತಿಯನ್ನು ದೆಹಲಿಯಲ್ಲಿ ಪಡೆದಿರುವ ಪ್ರೀಯಾಂಕಾ, 2ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪಾಸ್ ಮಾಡಿದ್ದಾರೆ. ಜಿಲ್ಲಾಧಿಕಾರಿಯಾಗುವ ಕನಸು ಕಂಡಿದ್ದಾರೆ.