ಬೆಂಗಳೂರು: ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯ ಆಶಯದಂತೆ ಮಕ್ಕಳನ್ನು ಮುಂದಿನ ತರಗತಿಗಳಿಗೆ ಮರು ದಾಖಲಾತಿ ಮಾಡುವುದು ಪೋಷಕರ ಕರ್ತವ್ಯವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡಲು ಮುಂದಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ರಾಜ್ಯದ ವಿವಿಧ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಶಾಲಾ ಮಂಡಳಿಗಳು, ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಉಪಕ್ರಮಗಳ ಕುರಿತು ಚರ್ಚಿಸಿದ ಅವರು, ಪೋಷಕರು ತಮ್ಮ ಮಕ್ಕಳನ್ನು ತಮ್ಮ ಮಕ್ಕಳು ಓದಿದ ಶಾಲೆ ಇಲ್ಲವೇ ತಮಗೆ ಅನುಕೂಲವಾದ ಶಾಲೆಗಳಲ್ಲಿ ಮರು ದಾಖಲಾತಿಗೊಳಿಸಲು ಕ್ರಮ ವಹಿಸಬೇಕೆಂದರು.
Advertisement
Advertisement
ಕೋವಿಡ್ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗೆ ದಾಖಲಾತಿ ಮಾಡದೇ ಇರುವುದು ಪರಿಹಾರವಾಗುವುದಿಲ್ಲ. ಇದು ಮಕ್ಕಳ ಹಕ್ಕಿನ ಕಸಿತವೂ ಆಗುತ್ತದೆ. ತಮ್ಮ ಮಕ್ಕಳನ್ನು ಮರುದಾಖಲಾತಿ ಮಾಡುವುದರಿಂದ ರಾಜ್ಯದ ಶಾಲೆಗಳಲ್ಲಿ ತರಗತಿವಾರು ಮಕ್ಕಳ ದಾಖಲಾತಿ ಸಂಖ್ಯೆ ಲೆಕ್ಕಕ್ಕೆ ದೊರೆಯಲಿದ್ದು, ಅದು ಮುಂದಿನ ತರಗತಿಗಳಿಗೆ ಮಕ್ಕಳನ್ನು ಉತ್ತೀರ್ಣಗೊಳಿಸಲು ಅನುವಾಗಲಿದೆ. ಮಕ್ಕಳ ಮರು ದಾಖಲಾತಿಗೆ ಎರಡು ಬಾರಿ ಸಮಯ ವಿಸ್ತರಿಸಲಾಗಿತ್ತು. ಆದರೂ ಕೆಲ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗಳಿಗೆ ಇನ್ನೂ ಮರು ದಾಖಲಾತಿ ಮಾಡದಿರುವುದಕ್ಕೆ ಕೋವಿಡ್ ಸಾಂಕ್ರಾಮಿಕ ಒಂದು ನೆಪವಾಗಬಾರದು ಎಂದರು.
Advertisement
ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಮಕ್ಕಳ ಹಿತದೃಷ್ಟಿಯಿಂದ ಶಾಲಾ ಶುಲ್ಕ ಹೆಚ್ಚಳ ಮಾಡದಿರುವ ಮತ್ತು ಸಾಧ್ಯವಾದಷ್ಟು ಶುಲ್ಕ ಇಳಿಸುವಂತಹ ಮತ್ತು ಶುಲ್ಕ ಪಾವತಿಸಲು ಕಂತುಗಳನ್ನು ನೀಡುವಂತಹುದು ಸೇರಿದಂತೆ ಮಾನವೀಯ ನಿಲುವುಗಳನ್ನು ಕೈಗೊಳ್ಳಲು ಹಿಂಜರಿಯಬಾರದು. ಶಾಲಾ ಶುಲ್ಕ ನಿಗದಿ ವಿಚಾರದಲ್ಲಿ ಮಕ್ಕಳ ಪೋಷಕರೊಂದಿಗೆ ಚರ್ಚಿಸಿ ಶಾಲಾ ಸಂಘಟನೆಗಳು ಅವರ ವಿಶ್ವಾಸವನ್ನೂ ಪಡೆದುಕೊಂಡು ಶೀಘ್ರ ಒಂದು ನಿರ್ಧಾರಕ್ಕೆ ಬಂದು ಸರ್ಕಾರಕ್ಕೆ ತಿಳಿಸಿದಲ್ಲಿ ಈ ಸಂಬಂಧ ಶಾಲಾ ಶುಲ್ಕ ನಿಗದಿ ಕುರಿತಂತೆ ಸರ್ಕಾರವು ಒಂದು ನಿರ್ಧಾರಕ್ಕೆ ಬರಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
Advertisement
ಶಿಕ್ಷಣ ಇಲಾಖೆಯ ಆಯುಕ್ತರು, ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ವಿಭಾಗಗಳ ನಿರ್ದೇಶಕರು, DSERT ನಿರ್ದೇಶಕರು, ಎಸೆಸೆಲ್ಸಿ ಪರೀಕ್ಷಾ ಮಂಡಳಿಯ ನಿರ್ದೇಶಕರು, ಮಧ್ಯಾಹ್ನದ ಬಿಸಿ ಊಟದ ವಿಭಾಗದ ನಿರ್ದೇಶಕರು…..
ಮತ್ತಿತರರೊಂದಿಗೆ ರಾಜ್ಯದ ಉಚ್ಚ ನ್ಯಾಯಾಲಯದ ಮುಂದಿರುವ ವಿಷಯಗಳೂ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸುದೀರ್ಘ ಸಭೆ ನಡೆಸಿದೆ. pic.twitter.com/agzV1bZMlx
— S.Suresh Kumar (@nimmasuresh) December 11, 2020
ಕೋವಿಡ್ ಸಮಸ್ಯೆ ಪ್ರತಿಯೊಬ್ಬರ ಜೀವನದ ಮೇಲೂ ತನ್ನದೇ ಆದ ರೀತಿಯ ಪರಿಣಾಮ ಬೀರಿದೆ. ಅದು ಮಕ್ಕಳ ಪೋಷಕರಿಗೆ ಆಗಿರುವಂತೆಯೇ ಶಾಲೆಗಳ ಮೇಲೂ ಆಗಿದೆ. ಇದು ಶಾಲೆ-ಮಕ್ಕಳು ಮಾತ್ರವೇ ಅಲ್ಲ, ದೇಶದ ಜನರ ಜೀವ ಮತ್ತು ಜೀವನದ ಮೇಲೆ ಸಾರ್ವತ್ರಿಕವಾದ ದುಷ್ಪರಿಣಾಮವನ್ನುಂಟು ಮಾಡಿರುವುದರಿಂದ ಪ್ರತಿಯೊಬ್ಬರೂ ಈ ಪರಿಸ್ಥಿತಿಯಲ್ಲಿ ಸಹ್ಯವಾದ ನಿರ್ಧಾರಗಳನ್ನೇ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.
ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮದಿಂದ ಇನ್ನೂ ಶಾಲೆಗಳನ್ನು ತೆರೆಯಲಾಗಿಲ್ಲ. ಖಾಸಗಿ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, ಅವರ ಸೇವೆಯ ಕುರಿತು ಸರ್ಕಾರಕ್ಕೆ ಗೌರವವಿದೆ. ಹಾಗೆಯೇ ನಮ್ಮ ಮಕ್ಕಳೂ ಬಹುಕಾಲ ಶಾಲೆಯಿಂದ ದೂರ ಉಳಿದಿರುವುದರಿಂದ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಇಂತಹ ಸಂಕಷ್ಟದ ಕಾಲದಲ್ಲಿ ಎಲ್ಲರೂ ತಮ್ಮ ತಮ್ಮ ಅನುಕೂಲಗಳತ್ತಲೇ ಗಮನಹರಿಸದೇ ಮಕ್ಕಳ ಹಿತದೃಷ್ಟಿಯಿಂದ ಆಡಳಿತ ಮಂಡಳಿಗಳು ಮತ್ತು ಪೋಷಕರು ತಮ್ಮ ಕೈಲಾದಷ್ಟು ತ್ಯಾಗಕ್ಕೆ ಮುಂದಾಗುವುದು ಒಳ್ಳೆಯದು ಎಂದರು.
ರಾಷ್ಟ್ರದ ಮತ್ತು ಸಮಾಜದ ಹಿತದೃಷ್ಟಿಯಿಂದ ಎಲ್ಲರಿಗೂ ನಮ್ಮ ಮಕ್ಕಳ ಹಿತವೇ ಮುಖ್ಯವಾಗಬೇಕು. ನಾವೆಲ್ಲರೂ ಆ ದೃಷ್ಟಿಯಿಂದ ಇಂದಿನ ಪರಿಸ್ಥಿತಿಯನ್ನು ಮನಗಾಣಬೇಕು. ಶಾಲಾಡಳಿತ ಮಂಡಳಿಗಳು ಶಿಕ್ಷಣ ಕಾಯ್ದೆಯಡಿ ತಮ್ಮ ಶಾಲೆಗಳಲ್ಲಿ ಪೋಷಕರ ಪ್ರತಿನಿಧಿಗಳನ್ನೊಳಗೊಂಡ ಶಾಲಾ ಸಲಹಾ ಸಮಿತಿಗಳನ್ನು ರಚಿಸಿಕೊಂಡು ಸೌಹಾರ್ದದ ವಾತಾವರಣದಲ್ಲಿ ಚರ್ಚಿಸಿ ಪರಸ್ಪರ ಹೊಂದಾಣಿಕೆಯ ಸೂತ್ರದೊಂದಿಗೆ ಬಂದಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರಲು ಸುಲಭವಾಗುತ್ತದೆ ಎಂದು ಸಚಿವರು ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ಆರೋಗ್ಯ ಇಲಾಖೆಯೊಂದಿಗೆ ಶಾಲೆಗಳನ್ನು ತೆರೆಯುವ ಸಂಬಂಧದಲ್ಲಿ ಶೀಘ್ರವೇ ಚರ್ಚೆ ನಡೆಸಲಾಗುವುದು. ಕೋವಿಡ್ ನಿಯಮಗಳನ್ನು ಪಾಲಿಸಿ 10 ರಿಂದ 12ನೇ ತರಗತಿಗಳನ್ನು ಆರಂಭಿಸುವ ದೃಷ್ಟಿಯಿಂದ ಮುಖ್ಯಮಂತ್ರಿಗಳೊಂದಿಗೆ ಶೀಘ್ರದಲ್ಲೇ ವಿವಿಧ ಇಲಾಖೆಗಳ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಎಂದು ಸುರೇಶ್ ಕುಮಾರ್ ಹೇಳಿದರು.
ಅನುದಾನ ರಹಿತ ಶಾಲಾ ಸಂಸ್ಥೆಗಳಿಗೆ ಅನುಷ್ಠಾನಯೋಗ್ಯ ರಿಯಾಯ್ತಿಗಳನ್ನು ವಿಸ್ತರಿಸುವ ಸಂಬಂಧದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರ್ಕಾರ ಸೂಕ್ತ ಕ್ರಮವಹಿಸಲಿದೆ ಎಂದೂ ಅವರು ತಿಳಿಸಿದರು. ಸಭೆಯಲ್ಲಿ ವಿವಿಧ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರು, ಪ್ರಾಚಾರ್ಯರು, ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.