ಬೆಂಗಳೂರು: ಖ್ಯಾತ ಬಹುಭಾಷಾ ಗಾಯಕ ಹಾಗೂ ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
Advertisement
‘ಈ ದೇಶ ಕಂಡ ದಿಗ್ಗಜ ಗಾಯಕ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿರುವ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಗಿದೆ. ಕಳೆದ ಮೂರು ದಿನಗಳಿಂದ ಒಂದಾದ ಮೇಲೊಂದರಂತೆ ಕೆಟ್ಟ ಸುದ್ದಿಗಳೇ ಬರುತ್ತಿರುವುದು ನೋವಿನ ವಿಚಾರ. ಅವರು ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿ 51 ದಿನಗಳು ಕಳೆದಿದ್ದು, ನಮ್ಮೆಲ್ಲರಿಗೂ ಅವರ ಆರೋಗ್ಯದ ಬಗ್ಗೆ ಚಿಂತೆ ಇತ್ತು. ಲಕ್ಷಾಂತರ ಅಭಿಮಾನಿಗಳು ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಆ ಯಮ ನಿಷ್ಕರುಣಿ. ಹೀಗಾಗಿ ನಮ್ಮ ಪ್ರಾರ್ಥನೆ ಫಲಿಸಲಿಲ್ಲ.
Advertisement
Advertisement
ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಾಲಸುಬ್ರಹ್ಮಣ್ಯಂ ತಮ್ಮ ಕಂಠ ಸಿರಿಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳಿ ನಾವು ಬೆಳೆದಿದ್ದೇವೆ. ಅವರ ಸಾಧನೆಗೆ ಪದ್ಮ ಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ 6 ಬಾರಿ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಾಯನ ನಿಲ್ಲಿಸಿದ ಎಸ್ಪಿ ಬಾಲಸುಬ್ರಹ್ಮಣ್ಯಂ
Advertisement
ಗಾನ ಗಾರುಡಿಗ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ.
ಅವರ ಮುಂದಾಳತ್ವದಲ್ಲಿ ದೀರ್ಘಕಾಲ ಮೂಡಿಬಂದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮವನ್ನು ವೀಕ್ಷಿಸುತಿದ್ದೆ. ಅವರ ಸರಳತೆ, ಸ್ಪರ್ಧಿಗಳನ್ನು ಹುರುದುಂಬಿಸುತ್ತಿದ್ದ ರೀತಿಗೆ ನಾನವರ ಅಭಿಮಾನಿಯಾಗಿದ್ದೆ.
ಇಂತಹ ಮಹಾನ್ ಗಾಯಕನಿಗೆ ನನ್ನ ಭಾವಪೂರ್ಣ ವಿದಾಯಗಳು. pic.twitter.com/gUe9pkFsxT
— DK Shivakumar (@DKShivakumar) September 25, 2020
ತಮ್ಮ ಸರಳತೆ, ವಿನಯತೆಯಿಂದಲೂ ಅಭಿಮಾನಿಗಳ ಮನಗೆದ್ದಿದ್ದ ಎಸ್ಪಿಬಿ ಅವರ ನಿಧನದಿಂದ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಒಂದು ಅದ್ಭುತ ಯುಗವೇ ಅಂತ್ಯವಾದಂತಾಗಿದೆ. ಅವರ ಮುಗಿಲೆತ್ತರದ ಸಾಧನೆ ಹಾಗೂ ಹಾಡುಗಳಿಂದ ಅವರು ನಮ್ಮೊಂದಿಗೆ ಸದಾ ಜೀವಂತವಾಗಿ ಇರುತ್ತಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ಈ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಡಿ.ಕೆ ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿ ಕಳಚಿದಂತಾಗಿದೆ – ಎಸ್ಪಿಬಿ ನಿಧನಕ್ಕೆ ಸಿಎಂ ಸಂತಾಪ
ಕೊರೊನಾ ಪಾಸಿಟಿವ್ ಬಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್ಪಿ ಅವರು ಇಂದು ಮಧ್ಯಾಹ್ನ 1.04ಕ್ಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಗಾನಗಾರುಡಿಗನ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.