ನವದೆಹಲಿ: ಕುತಂತ್ರಿ ಚೀನಾ ಪೂರ್ವನಿಯೋಜಿತವಾಗಿ ಈ ದಾಳಿ ನಡೆಸಿದೆ ಎಂದು ಭಾರತ ಹೇಳಿದ್ದರೂ ನಮ್ಮ ಸೈನಿಕರ ಮೇಲೆ ಯಾವ ರೀತಿ ಹೇಗೆ ದಾಳಿ ಮಾಡಿದ್ದರು ಎನ್ನುವ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗಳಿಗೆ ಫೋಟೋ ಈಗ ಉತ್ತರ ನೀಡಿದೆ.
ಮೊಳೆಗಳಿರುವ ಕಬ್ಬಿಣದ ರಾಡ್‌ಗಳನ್ನು ಬಳಸಿ ಚೀನಾ ಸೈನಿಕರು ಪೈಶಾಚಿಕ ಕೃತ್ಯ ಎಸಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಘಟನೆಯ ವೇಳೆ ಗಾಯಗೊಂಡ ಸೈನಿಕರು ಈ ರಾಡ್ ಅನ್ನು ಭಾರತದ ನೆಲೆಗೆ ತಂದಿದ್ದು, ಅದರ ಫೋಟೋ ಈಗ ವೈರಲ್ ಆಗಿದೆ.
Advertisement
ಪಾಕಿಸ್ತಾನದ ಬಾರ್ಡರ್ ಆಕ್ಷನ್ ಪಡೆ ಸಹ ಈ ತಂತ್ರವನ್ನೇ ಅನುಸರಿಸುತ್ತದೆ. ವೀರ ಯೋಧರ ಮರಣೋತ್ತರ ಪರೀಕ್ಷೆಯಲ್ಲೂ ದೇಹದ ಮೇಲೆ ಗಂಭೀರ ಗಾಯ ಇರುವುದು ದೃಢಪಟ್ಟಿದೆ.
Advertisement
Advertisement
ಘಟನೆ ಹೇಗಾಯ್ತು?
ಗಾಲ್ವಾನ್ ನದಿ ಪ್ರದೇಶದಲ್ಲಿ ಪೆಟ್ರೋಲಿಂಗ್ ಪಾಯಿಂಟ್ 14ರ ಬಳಿ ಚೀನಾ ಟೆಂಟ್ ನಿರ್ಮಿಸಿತ್ತು. ಕಳೆದ ವಾರ ಲೆಫ್ಟಿನೆಂಟ್ ಕಮಾಂಡರ್ ಮಟ್ಟದಲ್ಲಿ ಪಾಯಿಂಟ್ 14ನಲ್ಲಿ ಸಭೆ ನಡೆಸಿತ್ತು. ಮಾತುಕತೆಯಂತೆ ಟೆಂಟ್ ತೆರವು ಆಗಿದ್ಯಾ? ಇಲ್ವಾ? ಅಂತ ಪರಿಶೀಲನೆಗೆ ಭಾರತ ಹೋಗಿತ್ತು. ವಾಹನದಲ್ಲಿ ಕರ್ನಲ್ ಸಂತೋಷ್ ಬಾಬು, ಪಳನಿ, ಓಝೋ ಗಸ್ತು ಹೋಗಿದ್ದರು.
Advertisement
ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್ ತೆರವು ಮಾಡದ ಹಿನ್ನೆಲೆಯಲ್ಲಿ ಮಾತುಕತೆ ನಡೆಸುತ್ತಿದ್ದಾಗಲೇ ಚೀನಿ ಸೈನಿಕರು ಹಲ್ಲೆ ನಡೆಸಿದ್ದರು. ನಡೆಸಿದ ವಿಚಾರ ತಿಳಿದು ಭಾರತದ ಸೈನಿಕರು ಮತ್ತಷ್ಟು ಸಂಖ್ಯೆಯಲ್ಲಿ ಸ್ಥಳಕ್ಕೆ ಬಂದಾಗ ಚೀನಿಯರು ಕಲ್ಲು ತೂರಾಟ ನಡೆಸಿ ಕಬ್ಬಿಣದ ರಾಡ್‌ಗಳಿಂದ ಹೊಡೆದಿದ್ದಾರೆ. ಪರಿಣಾಮ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ವೇಳೆ ಭಾರತದ ಸೈನಿಕರು ತಿರುಗೇಟು ನೀಡಿ 43 ಚೀನಿ ಸೈನಿಕರನ್ನು ಹತ್ಯೆ ಮಾಡಿದ್ದಾರೆ.
ಗನ್ ಫೈರ್ ಮಾಡುವಂತಿಲ್ಲ:
ಭಾರತ ಮತ್ತು ಚೀನಾ ನಡುವೆ ಅಂತಾರಾಷ್ಟ್ರೀಯ ಗಡಿ ರೇಖೆ ಇಲ್ಲದ ಕಾರಣ ಗಡಿಯಲ್ಲಿ ಈ ರೀತಿ ಕಿತ್ತಾಟಗಳು ನಡೆಯುತಿತ್ತು. ಎರಡು ದೇಶಗಳ ಗಡಿಯನ್ನು ವಾಸ್ತವ ಗಡಿ ರೇಖೆಯಿಂದ(ಎಲ್‌ಎಸಿ – ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಗುರುತಿಸಲಾಗಿದೆ. ಆದರೆ ಹಲವು ಭಾಗಗಳಲ್ಲಿ ಭಾರತ ಮತ್ತು ಚೀನಾದ ನಡುವಿನ ಗಡಿಗಳು ನಿರ್ಧಾರವಾಗಿಲ್ಲ. ಹೀಗಾಗಿ ಹಲವು ಬಾರಿ ಎರಡು ಕಡೆಯ ಸೈನಿಕರು ಗಡಿಯಲ್ಲಿ ಪಹರೆ ಕಾಯುತ್ತಿದ್ದಾಗ ಕಿತ್ತಾಟಗಳು ನಡೆಯುತ್ತಿದ್ದವು. ಎರಡು ಕಡೆಯಿಂದಲೂ ಪ್ರತಿರೋಧಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ 1993, 1996ರಲ್ಲಿ ಭಾರತ ಮತ್ತು ಚೀನಾ ನಡುವೆ ಒಪ್ಪಂದ ನಡೆಯಿತು.
1993ರ ಒಪ್ಪಂದದ ಪ್ರಕಾರ ಎಲ್‌ಎಸಿ ದಾಟಿ ಯಾರೇ ಒಳಬಂದರೂ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಬೇಕು. 1996ರ ಪ್ರಕಾರ ಎಲ್‌ಎಸಿಯ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಎರಡು ದೇಶಗಳು ಯಾವುದೇ ಸ್ಫೋಟ ನಡೆಸಬಾರದು, ಗುಂಡಿನ ದಾಳಿ ನಡೆಸಕೂಡದು ಎಂಬ ಒಪ್ಪಂದಕ್ಕೆ ಬರಲಾಗಿದೆ. ಹೀಗಾಗಿ ಭಾರತ ಚೀನಾ ಗಡಿಯಲ್ಲಿ ಸೈನಿಕರು ಈ ಒಪ್ಪಂದಕ್ಕೆ ಬದ್ಧವಾಗಿದ್ದಾರೆ. ಗುಂಡಿನ ದಾಳಿಯ ಬದಲು ಪರಸ್ಪರ ಕಲ್ಲು, ದೊಣ್ಣೆಗಳಿಂದ ಬಡಿದಾಡಿಕೊಳ್ಳುತ್ತಾರೆ.
ಭಾರತ ಹೇಳಿದ್ದು ಏನು?
ಜೂನ್ 6 ರಂದು ನಡೆದ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆಯ ವೇಳೆ ಎಲ್‌ಎಸಿಯಿಂದ ಸೇನೆ ಹಿಂದಕ್ಕೆ ಬರುವ ಸಂಬಂಧ ಮಾತುಕತೆ ನಡೆದಿತ್ತು. ಆದರೆ ಚೀನಾ ಸೇನೆ ಭಾರತದ ಎಲ್‌ಎಸಿ ಬಳಿ ಟೆಂಟ್ ನಿರ್ಮಿಸಿತ್ತು. ವಿವಾದಕ್ಕೆ ಕಾರಣವಾದ ಈ ಟೆಂಟ್ ಅನ್ನು ಚೀನಾ ತೆರವು ಮಾಡಬೇಕಿತ್ತು. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ ಚೀನಾ ಸೇನೆ ಪೂರ್ವ ನಿಗದಿಯಂತೆ ದಾಳಿ ನಡೆಸಿದೆ. ಇದರಿಂದಾಗಿ ಸಾವು ನೋವು ಸಂಭವಿಸಿದೆ. ಈ ಘಟನೆಗೆ ಚೀನಾವೇ ನೇರ ಕಾರಣ.
ಈ ಘಟನೆಯಿಂದ ದ್ವಿಪಕ್ಷೀಯ ಮಾತುಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಜೂನ್ 6 ರಂದು ಕಮಾಂಡರ್ ಮಟ್ಟ ಮಾತುಕತೆಯ ವೇಳೆ ಏನು ನಿರ್ಧಾರ ಮಾಡಲಾಗಿದೆಯೋ ಅದನ್ನು ಎರಡು ದೇಶಗಳು ಪಾಲಿಸಬೇಕು. ಎರಡು ಕಡೆಯ ಸೈನಿಕರು ದ್ವಿಪಕ್ಷೀಯ ಒಪ್ಪಂದವನ್ನು ಪಾಲಿಸಬೇಕು ಎಂದು ಭಾರತ ಹೇಳಿದೆ.
ಚೀನಾ ಹೇಳಿದ್ದು ಏನು?
ಭಾರತದ ಸೇನೆ ಎಲ್‌ಎಸಿ ದಾಟಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದೆ. ಭಾರತ ಎಲ್ಲ ಒಪ್ಪಂದಗಳನ್ನು ಉಲ್ಲಂಘಿಸಿ ಈ ಕೃತ್ಯ ಎಸಗಿದೆ. ಚೀನಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಚೀನಿ ಸೈನಿಕರ ಮೇಲೆ ಹಲ್ಲೆ ಎಸಗಿದವರ ವಿರುದ್ಧ ಭಾರತ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸಬಾರದು. ನೂರು ಕೋಟಿ ಜನಸಂಖ್ಯೆ ಇರುವ ದೇಶಗಳಾದ ನಾವು ಅಭಿವೃದ್ಧಿ ವಿಚಾರಗಳಿಗೆ ಮನ್ನಣೆ ನೀಡಬೇಕು.