ಮೈಸೂರು : ಬೀದಿ ಬದಿಯಲ್ಲಿ ಕಸ ಹಾಕಿದ ಮೊಬೈಲ್ ಅಂಗಡಿಗಳಿಗೆ ಅದೇ ಕಸವನ್ನು ಪಾಲಿಕೆ ಅಧಿಕಾರಿಗಳು ಗಿಫ್ಟ್ ಆಗಿ ಕೊಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಮಹಾನಗರ ಪಾಲಿಕೆಯ ನಿಯಮವನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ಕಸ ಹಾಕಿದ ಎರಡು ಮೊಬೈಲ್ ಮಾರಾಟ ಮಳಿಗೆಗಳಿಗೆ ನಗರ ಪಾಲಿಕೆ ದಂಡ ವಿಧಿಸಿದೆ. ಸ್ವಚ್ಛ ಸರ್ವೇಕ್ಷಣ್ 2021ರ ಸರ್ವೇಕಾರ್ಯಗಳ ಅಂಗವಾಗಿ ಪಾಲಿಕೆಯ ಆಯುಕ್ತರು ಸೇರಿದಂತೆ ಎಲ್ಲಾ ಅಧಿಕಾರಿಗಳು ನಗರದ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Advertisement
Advertisement
ವಾರ್ಡ್- 47 ರ ಕುವೆಂಪುನಗರದ ಅಕ್ಷಯ ಭಂಡಾರ್ನಲ್ಲಿರುವ ಸಂಗೀತ ಹಾಗೂ ಪೂರ್ವಿಕ ಮೊಬೈಲ್ ಮಳಿಗೆಯ ಹೆಸರಿನ ಬಿಲ್ಗಳು, ಮೊಬೈಲ್ ಬಾಕ್ಸ್ ಸೇರಿದಂತೆ ಇನ್ನಿತರ ತ್ಯಾಜ್ಯವಸ್ತುಗಳನ್ನು ರಸ್ತೆಬದಿಯಲ್ಲಿ ಸುರಿಯಲಾಗಿತ್ತು. ಮೊಬೈಲ್ ಬಿಲ್ ಅನ್ನು ಗಮನಿಸಿದ ಅಧಿಕಾರಿಗಳು ತ್ಯಾಜ್ಯವನ್ನು ಮತ್ತೆ ಆಯಾ ಮಳಿಗೆಯ ಮುಂದೆ ಹಾಕಿದ್ದಾರೆ. ನಂತರ ಎರಡೂ ಮಳಿಗೆಗಳಿಗೂ 1 ಸಾವಿರ ರೂ. ದಂಡ ವಿಧಿಸಿದ್ದಾರೆ. ಇಂತಹ ಬೇಜಾವಬ್ದಾರಿತನ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಕಸ ಹಾಕಲೆಂದು ಪಾಲಿಕೆಯಿಂದ ನಿಗದಿತ ಸ್ಥಳ ಗುರುತಿಸಲಾಗಿದೆ. ಪ್ರತಿದಿನವೂ ಕಸ ವಿಲೇವಾರಿ ಮಾಡಲು ಪೌರಕಾರ್ಮಿಕ ಸಿಬ್ಬಂದಿ ಶ್ರಮವಹಿಸುತ್ತಾರೆ. ಆದರೆ ಕೆಲವರು ಎಲ್ಲೆಂದರಲ್ಲಿ ಕಸ ಹಾಕುವುದರಿಂದ ನಗರವನ್ನು ಸ್ವಚ್ಛವಾಗಿಡಲು ಸಾಧ್ಯವಿಲ್ಲ. ಹಾಗಾಗಿ ಇನ್ನು ಮುಂದೆ ಇಂತಹ ಘಟನೆ ನಡೆಯಬಾರದೆಂದು ಎರಡು ಮಳಿಗೆಗಳಿಗೆ ದಂಡ ವಿಧಿಸಲಾಗಿದೆ ಎಂದು ವಲಯ 3ರ ಆಯುಕ್ತ ಟಿ.ಎಸ್.ಸತ್ಯಮೂರ್ತಿ ತಿಳಿಸಿದ್ದಾರೆ.
Advertisement