ಉಡುಪಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಉಡುಪಿಯ ಕೃಷ್ಣಮಠದ ರಾಜಾಂಗಣ ಮೊದಲ ಬಾರಿಗೆ ಮುಳುಗಡೆಯಾಗಿದೆ.
ಉಡುಪಿಯಲ್ಲಿ ಕಳೆದ 24 ತಾಸುಗಳಲ್ಲಿ 316 ಮಿಲಿ ಮೀಟರ್ ಮಳೆ ಬಿದ್ದಿದೆ. ಉಡುಪಿ ತಾಲೂಕು ಒಂದರಲ್ಲಿಯೇ ಇಷ್ಟು ಪ್ರಮಾಣದ ಮಳೆ ಸುರಿದಿದೆ. ಶನಿವಾರ ಮಧ್ಯಾಹ್ನದಿಂದ ಉಡುಪಿಯಲ್ಲಿ ಹನಿ ನಿಲ್ಲದೆ ಮಳೆಯಾಗಿದೆ. ಸ್ವರ್ಣಾ, ಸೀತಾ, ಮಡಿಸಾಲು, ಉದ್ಯಾವರ, ಶಾಂಭವಿ, ಪಾಪನಾಶಿನಿ, ನದಿಗಳು ಮಟ್ಟ ಮೀರಿ ಹರಿಯುತ್ತಿವೆ. ಇತ್ತ ಕೃಷ್ಣಮಠ ಕೂಡ ಜಾಲವೃತವಾಗಿದೆ.
Advertisement
Advertisement
ಭಾರೀ ಮಳೆಯಿಂದ ಕೃಷ್ಣಮಠದ ರಾಜಾಂಗಣಕ್ಕೆ ನೀರು ನುಗ್ಗಿದೆ. ಇಂದ್ರಾಣಿ ನದಿಯ ರೌದ್ರ ನರ್ತನದಿಂದ ಮಠದ ಪಾರ್ಕಿಂಗ್ ಏರಿಯಾ ಸಂಪೂರ್ಣ ಜಲಾವೃತವಾಗಿದೆ. ಮಠದ ಗೀತಾ ಮಂದಿರ, ಭೋಜನಶಾಲೆ ಸುತ್ತಲೂ ನೀರು ತುಂಬಿದೆ. ಈ ವಿಚಾರವಾಗಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕೃಷ್ಣಮಠದ ಮ್ಯಾನೇಜರ್ ಗೋವಿಂದರಾಜ್, ನಾನು ಗೋಶಾಲೆಗೆ ಹೋಗಿ ಬಂದಿದ್ದು, ಅಲ್ಲಿ ಗೋವುಗಳೆಲ್ಲ ಸುರಕ್ಷಿತವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಜೊತೆಗೆ ಸದ್ಯ ಮಠದಲ್ಲಿರುವ ಜನರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮಠಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಮಠದ ಸುತ್ತಮುತ್ತಾ ಮಳೆ ನೀರು ತುಂಬಿ ಕೊಂಡಿದೆ. ತುಂಬಿಕೊಂಡ ನೀರನ್ನು ಮೋಟರ್ ಮೂಲಕ ಹೊರ ಹಾಕುವ ಕೆಲಸ ನಡೆಯುತ್ತಿದೆ. ಮಠದ ಸುತ್ತ ಇರುವ ಮನೆಗಳಿಗೆ ನೀರು ನುಗ್ಗಿದೆ ಅವರೆಲ್ಲರನ್ನು ರಕ್ಷಣೆ ಮಾಡಲಾಗಿದೆ ಎಂದು ಮ್ಯಾನೇಜರ್ ಗೋವಿಂದರಾಜ್ ತಿಳಿಸಿದ್ದಾರೆ.
ಉಡುಪಿ ತಾಲೂಕಿನಲ್ಲಿ ಅತ್ಯಧಿಕ 315.3 ಮಿ.ಮೀ. ಮಳೆ ದಾಖಲಾಗಿದೆ. ಮಲೆನಾಡಿನ ತಪ್ಪಲಿನಲ್ಲಿರುವ ಕಾರ್ಕಳ ತಾಲೂಕಿನಲ್ಲಿ 256.5 ಮಿ.ಮೀ. ಮಳೆ ಬಿದ್ದಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಹೆಚ್ಚು ಮಳೆಯಾಗುತ್ತಿದ್ದ ಕುಂದಾಪುರ ತಾಲೂಕಿನಲ್ಲಿ ಕನಿಷ್ಠ 54.5 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಬಿದ್ದ ಮಳೆ ಪ್ರಮಾಣದ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ.