DistrictsKarnatakaLatestMain PostMandya

ಮೈ ಶುಗರ್ ಫ್ಯಾಕ್ಟರಿಯಲ್ಲಿ ಸಾಕಷ್ಟು ಚಿತ್ರಗಳ ಶೂಟಿಂಗ್ ನಡೆದಿದೆ – ವಿರೋಧಿಗಳಿಗೆ ಸುಮಲತಾ ಕಿಡಿ

ಮಂಡ್ಯ: ಮಂಡ್ಯದಲ್ಲಿ ಕೆಲವರು ಸಣ್ಣ ವಿಷಯಕ್ಕೆ ನನ್ನ ಹೆಸರು ತರುತ್ತಿದ್ದಾರೆ ಇದರಿಂದ ಜನರಿಗೆ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲು ಸಾಧ್ಯವಿಲ್ಲ, ವಿವೇಚನೆ ಇಲ್ಲದವರು ಹೀಗೆ ಮಾತನಾಡುತ್ತಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಅವರ ಸಿನಿಮಾ ಮಂಡ್ಯದ ಮೈ ಶುಗರ್ ಕಾರ್ಖಾನೆಯಲ್ಲಿ ನಡೆಯುತ್ತಿರುವುದಕ್ಕೆ ಮಂಡ್ಯದಲ್ಲಿ ಒಂದಷ್ಟು ಜನ ನನ್ನ ಬಗ್ಗೆ ಕೆಲವರು ಕಮೆಂಟ್ ಮಾಡಿದ್ದಾರೆ. ಈ ಹಿಂದೆಯೂ ಸಹ ಮಂಡ್ಯ ಮೈ ಶುಗರ್ ಕಾರ್ಖಾನೆಯಲ್ಲಿ ಸಾಕಷ್ಟು ಚಿತ್ರಗಳು ಚಿತ್ರೀಕರಣವಾಗಿವೆ. ಇದು ಅಲ್ಲಿ ನಡೆಯುತ್ತಿರುವ ಮೊದಲ ಸಿನಿಮಾ ಅಲ್ಲ, ಹೀಗೆ ಇದ್ದರೂ ಕೆಲವರು ವಿವೇಚನೆ ಇಲ್ಲದೇ ಮಾತನಾಡುತ್ತಾರೆ. ಪ್ರತಿಯೊಂದಕ್ಕೂ ಅಡಚಣೆ ಮಾಡುತ್ತಾ ಇದ್ದರೆ ಒಳ್ಳೆಯ ಕೆಲಸ ಯಾವಾಗ ಮಾಡುತ್ತೀರಿ? ಎಲ್ಲಾ ನೆಗಿಟಿವ್ ಆಗಿ ಮಾತನಾಡಿ ವಿರೋಧ ಮಾಡಿಕೊಂಡು ಹೋದರೆ ಮಂಡ್ಯ ರೈತರಿಗೆ ವಿರೋಧಿಗಳಾಗುತ್ತೀರಿ ಎಂದು ಟಾಂಗ್ ನೀಡಿದರು.

ಇನ್ನೂ ಅತೀ ಹೆಚ್ಚು ದಿಶಾ ಸಭೆ ನಡೆಸಿದ ಸಂಸದೆ ಎಂಬ ಹೆಗ್ಗಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಈ ಬಗ್ಗೆ ಸಂತಸವಾಗುತ್ತಿದೆ. ಕರ್ನಾಟಕದಲ್ಲಿ ನಂ1 ಇದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ಅಧಿಕಾರಿಗಳು ಈ ವಿಚಾರವನ್ನು ನನಗೆ ಹೇಳಿದರು. ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ. ನಾನು ಯಶಸ್ವಿಗೋಸ್ಕರ ಏನು ಮಾಡುತ್ತಿಲ್ಲ, ಜನರು ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಅಷ್ಟೇ. ಮುಂದೆಯೂ ಇದೇ ರೀತಿಯ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು.

Leave a Reply

Your email address will not be published.

Back to top button