ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಅಧಿಕೃತವಾಗಿ ಗುರುವಾರ ಚಾಲನೆ ಸಿಕ್ಕಿದ್ದು, ದಸರಾದ ಮೊದಲ ಕಾರ್ಯಕ್ರಮವಾದ ಗಜಪಯಣ ಸಾಂಪ್ರದಾಯಿಕವಾಗಿ ನೇರವೇರಿದೆ.
ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ನೇರವೇರಿಸಲಾಗಿದ್ದು, ಗುರುವಾರ ಮೈಸೂರಿನ ಅರಣ್ಯ ಭವನಕ್ಕೆ ಗಜಪಡೆ ಎಂಟ್ರಿ ಕೊಟ್ಟಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನೇರವೇರಿದೆ. ಶುಭ ಲಗ್ನದಲ್ಲಿ ಗಜಪಡೆಗೆ ಪುಷ್ಪಾರ್ಚನೆ ಮೂಲಕ ಪೂಜೆ ನೇರವೇರಿಸಿದ ಜಿಲ್ಲಾಡಳಿತ ಬಳಿಕ ಗಜಪಯಣಕ್ಕೆ ಚಾಲನೆ ನೀಡಿತು.
ಸಿಂಗಾರಗೊಂಡ ಅಭಿಮನ್ಯು, ವಿಕ್ರಂ, ಗೋಪಿ, ವಿಜಯ, ಕಾವೇರಿ ಆನೆಗಳಿಗೆ ಫಲತಾಂಬೂಲ ನೀಡಿದರು. ಬಳಿಕ ಜಿಲ್ಲಾಡಳಿತದ ವತಿಯಿಂದ ಆನೆ ಮಾವುತರಿಗೆ ಸನ್ಮಾನ ಮಾಡಿ ಆತ್ಮೀಯವಾಗಿ ಗೌರವಿಸಿದರು. ನಂತರ ಅರಣ್ಯ ಇಲಾಖೆಯ ಟ್ರಕ್‍ಗಳ ಮೂಲಕ ಗಜಪಡೆ ಮೈಸೂರಿನ ಅರಣ್ಯ ಭವನಕ್ಕೆ ಎಂಟ್ರಿ ಕೊಟ್ಟಿದೆ. ನಿನ್ನೆಯೇ ಮೈಸೂರಿಗೆ ಗಜಪಡೆ ಬಂದರು ಸಹ ಇಂದು ಆನೆಗಳು ಅರಮನೆ ಪ್ರವೇಶ ಮಾಡಲಿವೆ.
ಸದ್ಯಕ್ಕೆ ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲೇ ಅಭಿಮನ್ಯು ತಂಡವನ್ನು ಇರಿಸಲಾಗಿದೆ. ಇಂದು ಅರಣ್ಯ ಭವನದಲ್ಲೂ ವಿಶೇಷ ಪೂಜೆ ನೇರವೇರಿಸಿ, ಮಧ್ಯಾಹ್ನ 12.18 ನಿಮಿಷದ ಶುಭ ಲಗ್ನದಲ್ಲಿ ಅರಮನೆಯಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಸಿಗಲಿದೆ. ಈ ಕಾರ್ಯಕ್ರಮಕ್ಕೂ ಸಹ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅರಮನೆಗೆ ಗಜಪಡೆಯನ್ನ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಿದ್ದಾರೆ.