Connect with us

Bengaluru City

ಮೈತ್ರಿ ಸರ್ಕಾರದ ಬಗ್ಗೆ ಮೌನ ಮುರಿಯಲು ಕಾರಣ ಬಿಚ್ಚಿಟ್ಟ ಹೆಚ್‍ಡಿಕೆ

Published

on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ಪತನವಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸುದೀರ್ಘವಾದ ಪತ್ರ ಬರೆದಿದ್ದು, ಈ ಪತ್ರದಲ್ಲಿದ್ದ ಕೆಲವೊಂದು ವಿಚಾರಗಳು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ ಮಾಜಿ ಸಿಎಂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ರಾಜ್ಯದಲ್ಲಿ 8 ಇಲ್ಲವೆ 10 ಸ್ಥಾನ ಗೆಲ್ಲಬಹುದಿತ್ತು ಎಂದು ಸಿದ್ದರಾಮಯ್ಯ ಅವರು ಇತ್ತೀಚೆಗೆ ‘ಮೆಲುಕು’ ಹಾಕಿದ್ದರಿಂದಲೇ ನಾನು ಸಿದ್ಧೌಷಧದ ಬಗ್ಗೆ ನೆನಪಿಸಿಕೊಳ್ಳಬೇಕಾಯಿತು ಎಂದು ಬರೆದುಕೊಂಡಿದ್ದಾರೆ.

ಅವರ ಕನಸು-ಕನವರಿಕೆಗಳನ್ನು ಮೈತ್ರಿ ಸರ್ಕಾರ ಹೋದ ನಂತರವೂ ಜಪಿಸುತ್ತಿರುವುದರಿಂದಲೇ ಹಳೆಯದನ್ನು ನೆನಪಿಸಿಕೊಳ್ಳಬೇಕಾಯಿತು. ನಮ್ಮ ಅವರ ದೋಸ್ತಿ ಕಳಚಿದ ನಂತರ ಈ ಬಗ್ಗೆ ನಾನು ಮಾತನಾಡಿರಲಿಲ್ಲ. ಕಾಂಗ್ರೆಸ್ ನಾಯಕರೇ ಪದೇಪದೇ ಮೈತ್ರಿ ಮುಗಿದ ಅಧ್ಯಾಯ ಎಂದು ಈಗ ತುಟಿ ಬಿಚ್ಚುತ್ತಿರುವುದರಿಂದ ನಾನು ಮೌನ ಮುರಿಯಬೇಕಾಯಿತು ಎಂದಿದ್ದಾರೆ.

ಕಾಂಗ್ರೆಸ್ ನಾಯಕರು ಈಗ ಮರಣೋತ್ತರ ಪರೀಕ್ಷೆ ಬಗ್ಗೆ ರಾಗ ಎಳೆಯುತ್ತಿದ್ದಾರೆ. ಆದರೆ ವರದಿಯಲ್ಲಿ ಏನಿದೆ ಎಂಬ ಸತ್ಯಾಂಶವನ್ನು ನಾನು ಹೇಳಿದರೆ ಆ ಭಾಷೆ ನನಗೆ ಅರ್ಥವಾಗಲಿಲ್ಲ ಎಂದು ಜಾರಿಕೊಳ್ಳುವುದು ತರವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಪತನವಾಗಿ 1 ವರ್ಷ- ಕಾರ್ಯಕರ್ತರಿಗೆ ಹೆಚ್‍ಡಿಕೆ ಮನದಾಳದ ಮಾತು

ಹೆಚ್‍ಡಿಕೆ ಪತ್ರದಲ್ಲಿ, ಸಿದ್ದರಾಮಯ್ಯ ಸರ್ಕಾರದ ಬಜೆಟ್ ನ ಲೇಖಾನುದಾನ ಪಡೆದು ಸರ್ಕಾರ ಮುಂದುವರಿಸಿದರೆ ಸಾಕು. ಹೊಸದಾಗಿ ಬಜೆಟ್ ಬೇಡ ಎಂದು ಕಾಂಗ್ರೆಸ್ಸಿನ ಕೆಲವರು ಒತ್ತಡ ತಂದರು. ಆದರೆ ರೈತರ ಸಾಲ ಮನ್ನಾ ಮಾಡುವ ಸಲುವಾಗಿ ಹೊಸದಾಗಿ ಎರಡು ಬಾರಿ ಬಜೆಟ್ ಮಂಡಿಸಿ 25 ಸಾವಿರ ಕೋಟಿ ರೂಪಾಯಿಗಳ ರೈತರ ಸಾಲ ಮನ್ನಾ ಹಣ ಹಂಚಿಕೆ ಮಾಡಿದೆ. ಹಾಗಂತ ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳನ್ನು ನಿಲ್ಲಿಸಿರಲಿಲ್ಲ. ಮುಂದುವರಿಸಿಕೊಂಡು ಬಂದೆ. ಆದಾಗ್ಯೂ ಅವರಿಗೆ ತೃಪ್ತಿ ಆಗಿರಲಿಲ್ಲ. 14 ತಿಂಗಳ ಅವಧಿಯಲ್ಲಿ ಯಾವುದೇ ಲೋಪವನ್ನು ಮಾಡಲಿಲ್ಲ. ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುವಂತೆ ಲೋಕಸಭಾ ಚುನಾವಣೆ ಮುಗಿಯಲಿ, ಅಲ್ಲಿಯವರಿಗೆ ತಡೆಯಿರಿ ಎಂಬ ‘ಸಿದ್ಧೌಷಧ’ ಮಂತ್ರ ಜಪಿಸುತ್ತಲೇ ಕಾಂಗ್ರೆಸ್ಸಿಗರು ಬಂದರು. ಅದು ಜಗಜ್ಜಾಹೀರಾಯಿತು ಎಂದು ಬರೆದುಕೊಂಡಿದ್ದರು.

Click to comment

Leave a Reply

Your email address will not be published. Required fields are marked *