ತಿರುವನಂತಪುರಂ: ತನಗೆ 75 ವರ್ಷ ವಯಸ್ಸಾದರೂ ಆ್ಯಕ್ಟೀವ್ ಆಗಿರಬೇಕು ಎಂದು ಅಜ್ಜಿಯೊಬ್ಬರು ಛತ್ರಿ ತಯಾರು ಮಾಡುತ್ತಿದ್ದಾರೆ.
ಹೌದು. ಚಾಕೋ ಮೂಲದ ಕೊಟ್ಟಪ್ಪಡಿ ಚೋವಲ್ಲೂರ್ ಪತ್ನಿ ಎಲ್ಸಿ ಎಂಬ ಅಜ್ಜಿ ವಿವಿಧ ರೀತಿಯ ಫ್ಯಾನ್ಸಿ ಕೊಡೆಗಳನ್ನು ತಯಾರು ಮಾಡುತ್ತಿದ್ದಾರೆ. ಈ ಮೂಲಕ ವೃದ್ಧೆ ತನ್ನನ್ನು ತಾನೂ ಕ್ರೀಯಾಶೀಲರನ್ನಾಗಿಸಿಕೊಳ್ಳುತ್ತಿದ್ದಾರೆ.
ಸದ್ಯ ಅಜ್ಜಿ ತಯಾರಿಸಿದ ಛತ್ರಿಗಳು ಕೊಟ್ಟಪ್ಪಡಿ ಮಾರುಕಟ್ಟೆ ಪ್ರದೇಶದಲ್ಲಿ ಕಾಣಸಿಗುತ್ತದೆ. ಅಲ್ಲಿನ ಬಸ್, ಆಟೋ ರಿಕ್ಷಾಗಳಲ್ಲಿ ಚಿಕ್ಕ ಚಿಕ್ಕ ಫ್ಯಾನ್ಸಿ ರೀತಿಯ ಕೊಡೆಗಳನ್ನು ಕಾಣಬಹುದಾಗಿದೆ. ಆದರೆ ಇದನ್ನು ತಯಾರಿಸುವುದು ಎಲ್ಸಿ ಅಜ್ಜಿ ಎಂದು ಅಲ್ಲಿನ ಬಹುತೇಕ ಮಂದಿಗೆ ತಿಳಿದಿಲ್ಲ. ಕಲರ್ ಪೇಪರ್ಸ್ ಬಳಸಿ ಅಜ್ಜಿ ಈ ಕೊಡೆಗಳನ್ನು ತಯಾರಿಸಿ ಮನೆಯ ಗ್ರಿಲ್ ನಲ್ಲಿ ತೂಗು ಹಾಕುತ್ತಾರೆ. ಅಜ್ಜಿಯ ಮನೆ ರಸ್ತೆ ಬದಿಯಲ್ಲೇ ಇರುವುದರಿಂದ ದಾರಿಯಲ್ಲಿ ಹೋಗುವವರ ಕಣ್ಣುಗಳು ಈ ಕೊಡೆಗಳತ್ತ ಸೆಳೆಯುತ್ತವೆ.
ಹೀಗೆ ಹೋಗುವ ದಾರಿ ಹೋಕರು ಫ್ಯಾನ್ಸಿ ಕೊಡೆಗಳಿಗೆ ಮಾರು ಹೋಗಿ ಖರೀದಿಸಲು ಅಜ್ಜಿಯ ಮನೆಗೆ ಬರುತ್ತಾರೆ. ಹಾಗೆಯೇ ಅಜ್ಜಿ, ಒಂದು ಕೊಡೆಗೆ 10 ರೂ. ನಂತೆ ಮಾರಾಟ ಮಾಡುತ್ತಾರೆ. ಕೇವಲ ಕೊಡೆ ಮಾತ್ರವಲ್ಲದೆ ಅಜ್ಜಿ ತಾಳೆ ಗರಿಗಳಿಂದ ಕೈ ಬೀಸಣಿಕೆ, ಪ್ಲಾಸ್ಟಿಕ್ ರೋಬೋಟ್, ಸಣ್ಣ ಸಣ್ಣ ಬಟ್ಟೆ ಚೀಲಗಳು ಹಾಗೂ ಇತರ ಕರಕುಶಲ ವಸ್ತುಗಳನ್ನು ಕೂಡ ತಯಾರಿಸುತ್ತಾರೆ.
ಒಟ್ಟಿನಲ್ಲಿ ತನ್ನನ್ನು ತಾನು ಆ್ಯಕ್ಟೀವ್ ಆಗಿ ಇರಿಸಿಕೊಂಡಿದ್ದರಿಂದ ಯಾವುದೇ ಕಾಯಿಲೆಗಳಿಗೆ ಒಳಗಾಗಿಲ್ಲ ಎಂದು ಎಲ್ಸಿ ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಜನ ಸುಮ್ಮನೆ ಕುಳಿತರೆ ಸುಸ್ತು ಹಾಗೂ ಅನಾರೋಗ್ಯಕ್ಕೀಡಾಗುತ್ತಾರೆ. ಹೀಗಾಗಿ ನಾನು ಪ್ರತಿ ದಿನ ಆ್ಯಕ್ಟೀವ್ ಆಗಿರಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಪ್ರಸ್ತುತ ಅಜ್ಜಿ ತನ್ನ ಕಿರಿಯ ಮಗನೊಂದಿಗೆ ವಾಸವಾಗಿದ್ದು, ಮಗನ ಪುತ್ರಿ ಅಜ್ಜಿಗೆ ವಸ್ತುಗಳನ್ನು ಖರೀದಿಸುವ ಮೂಲಕ ಅಜ್ಜಿಗೆ ಕರಕುಶಲ ವಸ್ತುಗಳನ್ನು ತಯಾರಿಸಲು ಸಾಥ್ ನೀಡುತ್ತಿದ್ದಾರೆ.