ಬೆಳಗಾವಿ/ಚಿಕ್ಕೋಡಿ: ಮುಂಬೈನಿಂದ ಬಂದ 200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಗೆಸ್ಟ್ ಹೌಸ್ನಲ್ಲೇ ಆಶ್ರಯ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಮಹಾಮಾರಿ ಕೊರೊನಾದಿಂದ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಂದಂತಾಗಿದೆ. ಕೊರೊನಾ ಭೀತಿಯಿಂದ ದುಡಿಮೆ ಇಲ್ಲದೇ ತಮ್ಮ ಗ್ರಾಮಗಳಿಗೆ ವಾಪಸ್ ಆಗುತ್ತಿರುವ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ತಮ್ಮ ಗ್ರಾಮಗಳಿಗೆ ಬರುವ ಕಾರ್ಮಿಕರನ್ನು ಯಾವುದೋ ಸರ್ಕಾರಿ ಕಟ್ಟಡದಲ್ಲಿ ಇಟ್ಟು ಕ್ವಾರಂಟೈನ್ ಮಾಡುವ ಬದಲು ಸತೀಶ್ ಜಾರಕಿಹೊಳಿ ಅವರು ವಲಸೆ ಕಾರ್ಮಿಕರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಲದಾಳ ಗ್ರಾಮದಲ್ಲಿರುವ ತಮ್ಮ ಗೆಸ್ಟ್ ಹೌಸ್ನಲ್ಲಿ ಕ್ವಾರಂಟೈನ್ ಮಾಡಿಸಿ ಮಾದರಿಯಾಗಿದ್ದಾರೆ.
Advertisement
Advertisement
ಗೆಸ್ಟ್ ಹೌಸ್ನಲ್ಲಿ ಇರುವ ಎಲ್ಲ ಕಾರ್ಮಿಕರು ಮುಂಬೈನಿಂದ ಬಂದವರಾಗಿದ್ದಾರೆ. ದಿನನಿತ್ಯ ಎಲ್ಲ ಕಾರ್ಮಿಕರಿಗೂ ತಮ್ಮ ಸ್ವಂತ ಹಣದಿಂದ 2 ಬಾರಿ ಊಟ, 2 ಬಾರಿ ಉಪಹಾರ ಸೇರಿದಂತೆ ಹಣ್ಣು ಹಂಪಲ ನೀಡುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ಕ್ಷೇತ್ರದಲ್ಲಿ ವಿವಿಧ ಕಡೆ ಕ್ವಾರಂಟೈನ್ ಇರುವ 1 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಊಟ ಉಪಹಾರ ತಲುಪಿಸುತ್ತಿದ್ದಾರೆ. ಅಲ್ಲದೇ ಎಲ್ಲ ಕಾರ್ಮಿಕರಿಗೆ ಕಾಲ ಕಳೆಯಲು ಆಟಿಕೆ ಸಾಮಾನುಗಳನ್ನು ವಿತರಿಸಿದ್ದಾರೆ.
Advertisement
Advertisement
ದೇಶದಲ್ಲಿ ಕೊರೊನಾ ಕೇಂದ್ರವೆಂದೇ ಬಿಂಬಿತವಾಗಿರುವ ಮುಂಬೈನಿಂದ ತಮ್ಮ ಊರುಗಳಿಗೆ ಆಗಮಿಸಿದ ಯಮಕನಮರಡಿ ಕ್ಷೇತ್ರದ ವಲಸೆ ಕಾರ್ಮಿಕರನ್ನು ಕೊರೊನಾ ಭಯದಿಂದ ಗ್ರಾಮಸ್ಥರು ಊರಿನೊಳಗೆ ಸೇರಿಸಿಕೊಳ್ಳಲಿಲ್ಲ. ಕ್ವಾರಂಟೈನ್ನಲ್ಲಿ ವ್ಯವಸ್ಥೆಯೂ ಆಗಿರಲಿಲ್ಲ. ಇಂಥ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತನ್ನ ಕ್ಷೇತ್ರದವರು ಎಂದು ಅರಿತ ಸತೀಶ್ ಜಾರಕಿಹೊಳಿ ಹೆಚ್ಚು ಯೋಚನೆ ಮಾಡದೆ, ಸುಮಾರು 200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ತಮ್ಮ ಸಹಾಯಕ್ಕೆ ನಿಂತಿರುವ ಸತೀಶ್ ಜಾರಕಿಹೊಳಿ ಸೇವೆಗೆ ಕಾರ್ಮಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಸತೀಶ್ ಜಾರಕಿಹೊಳಿ ಕೊರೊನಾ ದಾಳಿಗೆ ಸಿಲುಕಿದ ರೈತರ, ಬಡವರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದ್ದರು. ರೈತರು ಬೆಳೆದ ತರಕಾರಿ ಮಾರಾಟಕ್ಕೆ ಸಾಧ್ಯವಾಗದೆ ಹೊಲದಲ್ಲಿಯೇ ಕೊಳೆತು ಹೋಗುವ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಸ್ವತಃ ಹೊಲಗದ್ದೆಗಳಿಗೆ ಇಳಿದು, ರೈತರ ತರಕಾರಿಗಳನ್ನು ಖರೀದಿಸಿ, ಬಡವರಿಗೆ, ಅಸಹಾಯಕರಿಗೆ ಉಚಿತವಾಗಿ ಹಂಚುವುದರ ಮೂಲಕ ಸಹಾಯ ಮಾಡಿದ್ದರು. ಈಗ ಮತ್ತೆ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.