ಹಾವೇರಿ: ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ನಿವಾಸಿ, ಮುಂಬೈನಿಂದ ಬಂದಿದ್ದ 57 ವರ್ಷದ ಕಾರ್ಮಿಕನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ಮೇ 19 ರಂದು ಶಿಗ್ಗಾಂವಿಗೆ ಬಂದು ಕ್ವಾರಂಟೈನ್ ಆಗಿದ್ದ. ಸೋಂಕಿತ ಓಲಾ ಕಾರ್ ಬಾಡಿಗೆ ಮಾಡಿಕೊಂಡು ಪತ್ನಿ ಮತ್ತು ಮಗಳೊಂದಿಗೆ ಶಿಗ್ಗಾಂವಿಗೆ ಬಂದಿದ್ದ. ಈ ವೇಳೆ ಶಿಗ್ಗಾಂವಿ ತಾಲೂಕು ಜಕ್ಕಿನಕಟ್ಟಿ ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಂತರ ಮೇ 24ರಂದು ಸೋಂಕಿತನ ಗಂಟಲು ದ್ರವವನ್ನು ಲ್ಯಾಬ್ಗೆ ಕಳಿಸಿಕೊಡಲಾಗಿತ್ತು. ಸೋಂಕು ದೃಢಪಡುತ್ತಿದ್ದಂತೆ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Advertisement
Advertisement
ಸೋಂಕಿತ ವಾಸವಾಗಿದ್ದ ಜಕ್ಕಿನಕಟ್ಟಿಯ ರಾಣಿ ಚೆನ್ನಮ್ಮ ವಸತಿ ಶಾಲೆಯ ಸುತ್ತ ನೂರು ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಜಕ್ಕಿನಕಟ್ಟಿ ಗ್ರಾಮವನ್ನು ಬಫರ್ ಝೋನ್ ಮಾಡಿ ಜಿಲ್ಲಾಡಳಿತ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿದ್ದು, ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಇದುವರೆಗೆ 6 ಜನ ಗುಣಮುಖರಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 9 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.