ಬೆಂಗಳೂರು: ಕೊರೊನಾ ಕಾರಣ ರಾಜ್ಯದಲ್ಲಿ ದಿನವೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ. ‘ಯುದ್ಧಕಾಲೇ ಶಸ್ತ್ರಭ್ಯಾಸ’ ಎಂಬಂತೆ ಸರ್ಕಾರ ಕಳೆದ ನಾಲ್ಕು ದಿನಗಳಿಂದ ಮೀಟಿಂಗ್ ಮೇಲೆ ಮೀಟಿಂಗ್‍ಗಳನ್ನು ಮಾಡುತ್ತಿದೆ. ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದ ಕೂಡಲೇ ಅರ್ಧ ಅಥವಾ ಸಂಪೂರ್ಣ ಲಾಕ್‍ಡೌನ್ ಜಾರಿ ಆಗುವುದು ಬಹುತೇಕ ಫಿಕ್ಸ್ ಆಗಿದೆ.
ಈ ಕುರಿತು ಮಾತನಾಡಿದ ಸಚಿವ ಸಿಟಿ ರವಿ ಅವರು, ಮುಂದಿನ 20 ದಿನಗಳ ಕಾಲ ನಿಮ್ಮೆಲ್ಲಾ ಪ್ರವಾಸ ಮುಂದೂಡಿ ಎಂಬ ಸಲಹೆಯನ್ನು ರಾಜ್ಯದ ಜನತೆಗೆ ನೀಡಿದ್ದಾರೆ. ಕೊರೊನಾ ಕುರಿತ ಭಯ ಜನರನ್ನು ಕಾಡುತ್ತಿದೆ. ಬೆಂಗಳೂರಿನಲ್ಲಿ ಹೆಚ್ಚು ಕೇಸ್ ಬರುತ್ತಿರುವುದರಿಂದ ಪ್ರವಾಸೋದ್ಯಮ ಸ್ಥಳಗಳ ಸಮೀಪ ವಾಸಿಸುವ ಜನರಲ್ಲಿ ಭಯ ಕಾಡುತ್ತಿದೆ. ಆದ್ದರಿಂದ ನಿಮ್ಮ ಪ್ರವಾಸವನ್ನು ಮುಂದಿನ 15-20 ದಿನಗಳವರೆಗೂ ಮುಂದೂಡಿ. ತಜ್ಞರು ನೀಡುವ ಸಲಹೆ ಮೇರೆಗೆ ಲಾಕ್‍ಡೌನ್ ಮಾಡಬೇಕಾ..? ಬೇಡವಾ..? ಎಂದು ಯೋಚನೆ ಮಾಡುತ್ತೇವೆ ಎಂದರು.
ಲಾಕ್‍ಡೌನ್ ನಿರ್ಧಾರ ರಾಜಕೀಯಕ್ಕೆ ಸಂಬಂಧಿಸಿದ ವಿಚಾರವಲ್ಲ. ಯಾರು ಕೊರೊನಾ ಕುರಿತು ಮೈ ಮರೆಯಬಾರದು, ಎಲ್ಲಾ ಎಚ್ಚರಿಕೆಯಿಂದ ಇರಬೇಕು. ಸಮುದಾಯಕ್ಕೆ ಸೋಂಕು ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಕಾಂಗ್ರೆಸ್‍ನ ಅನೇಕ ಹಿರಿಯ ನಾಯಕರಿಗೆ ಭಯ ಹುಟ್ಟಿಸುವಂತಿದೆ. ನನಗೆ ಬಿಜೆಪಿ ಪಕ್ಷದವರ ಜೊತೆ ಮಾತ್ರ ಸಂಬಂಧವಿದ್ದು, ಬೇರೆ ಪಕ್ಷದವರ ಜೊತೆಗೆ ಯಾವುದೇ ಸೋದರ ಮಾವನ ಸಂಬಂಧ ಇಲ್ಲ ಎಂದು ವ್ಯಂಗ್ಯವಾಡಿದರು.
ಉಳಿದಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರಾಜ್ಯದಲ್ಲಿ ಲಾಕ್‍ಡೌನ್ ಮಾಡಲು ನಿರ್ಧರಿಸಿದರೆ ಯಾವ ಮಾದರಿಯ ಲಾಕ್‍ಡೌನ್ ಎನ್ನುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಲಿದ್ದಾರೆ. ಮೊದಲು ಬೆಂಗಳೂರಿಗಷ್ಟೇ ಸೀಮಿತ ಎಂದುಕೊಂಡಿದ್ದ ಲಾಕ್‍ಡೌನ್‍ನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂಬ ಮಾಹಿತಿ ಲಭಿಸಿದೆ.