ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಎದುರಾಗಿದ್ದ ಭೂಕುಸಿತದಿಂದ ಜನ ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಹೀಗಾಗಿ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆ ಭಾರೀ ವಾಹನಗಳ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ನಿಷೇಧ ಹೇರಿ ಆದೇಶಿಸಿದೆ.
ಕೊಡಗಿನಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಭೂಮಿಯಲ್ಲಿ ತೇವಾಂಶ ಹೆಚ್ಚಾದಂತೆ ಭೂ ಕುಸಿತ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಬುಲೆಟ್ ಟ್ಯಾಂಕರ್ಸ್, ಶಿಫ್ ಕಾರ್ಗೋ, ಕಂಟೈನರ್, ಲಾಂಗ್ ಚಾಸಿಸ್ ವಾಹನಗಳು ಸೇರಿದಂತೆ ಎಲ್ಲ ಬಗೆಯ ಭಾರಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
Advertisement
Advertisement
ಅಡುಗೆ ಅನಿಲ, ಇಂಧನ ಪೂರೈಕೆ, ಹಾಲು ಹಾಗೂ ಸರ್ಕಾರಿ ಕೆಲಸದ ನಿಮಿತ್ತ ಸಂಚರಿಸುವ ವಾಹನಗಳು, ಶಾಲಾ-ಕಾಲೇಜು ಹಾಗೂ ಸಾರ್ವಜನಿಕರು ಪ್ರಯಾಣಿಸುವ ವಾಹನಗಳನ್ನು ಹೊರತುಪಡಿಸಿ, ಮರದ ದಿಮ್ಮಿಗಳ ಸಾಗಾಟ ಮತ್ತು ಮರಳು ಸಾಗಾಟಕ್ಕೂ ನಿಷೇಧ ಹೇರಲಾಗಿದೆ. ಜೂನ್ 11 ರಿಂದ ಆಗಸ್ಟ್ 10ರ ವರೆಗೆ ಎರಡು ತಿಂಗಳುಗಳ ಕಾಲ ಎಲ್ಲ ಬಗೆಯ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಆದೇಶಿಸಿದ್ದಾರೆ.