ChikkamagaluruKarnatakaLatestMain PostMonsoon

ಮಲೆನಾಡಲ್ಲಿ ಭಾರೀ ಮಳೆ- ಉಕ್ಕಿ ಹರಿಯುತ್ತಿದೆ ಕಲ್ಲತ್ತಿಗಿರಿ ಜಲಪಾತ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಮತ್ತೆ ವರುಣನ ಅಬ್ಬರ ಜೋರಾಗಿದ್ದು, ಸುರಿಯುತ್ತಿರುವ ಭಾರೀ ಮಳೆಗೆ ಜಲಪಾತಗಳು ಉಕ್ಕಿ ಹರಿಯುತ್ತಿವೆ. ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.

ಕಾಫಿನಾಡಿನ ಗಿರಿ ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಗೆ ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದೆ. ಭಾರೀ ನೀರಿನಿಂದ ಉಕ್ಕಿ ಹರಿಯುತ್ತಿರುವ ಜಲಪಾತ ಪ್ರವಾಸಿಹರನ್ನು ತನ್ನತ್ತ ಸೆಳೆಯುತ್ತಿದೆ. ಹೀಗಾಗಿ ಮುಳ್ಳಯ್ಯನಗಿರಿ ಬೆಟ್ಟ ಸೇರಿದಂತೆ ಈ ಭಾಗಕ್ಕೆ ಭೇಟಿ ನೀಡಿದ ಪ್ರವಾಸಿಗರು ಜಲಪಾತದ ಬಳಿ ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಶನಿವಾರ ಮಧ್ಯಾಹ್ನದಿಂದ ಮುಳ್ಳಯ್ಯನ ಗಿರಿ ಹಾಗೂ ದತ್ತ ಪೀಠ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಲ್ಲತ್ತಿಗಿರಿ ಜಲಪಾತಕ್ಕೆ ಅತೀ ಹೆಚ್ಚು ನೀರು ಹರಿದು ಬಂದಿದೆ. ಹೀಗಾಗಿ ಜಲಪಾತಕ್ಕೆ ಜೀವಕಳೆ ಬಂದಿದೆ. ಪ್ರವಾಸಿಗರ ದಂಡು ಮಲೆನಾಡಿಗೆ ಹೆಚ್ಚು ಆಗಮಿಸುತ್ತಿದ್ದು, ಅದರಲ್ಲೂ ಚಿಕ್ಕಮಗಳೂರಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಜಲಪಾತದ ರಮಣೀಯ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದಾರೆ.

ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮೂಡಿಗೆರೆ, ಕೊಪ್ಪ, ಎನ್‍ಆರ್ ಪುರ, ಶೃಂಗೇರಿಯಲ್ಲಿ ಮಳೆ ಜೋರಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಕಳಸ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಎರಡು ಅಡಿಯಷ್ಟು ನೀರಿನ ಹರಿಯುತ್ತಿದೆ. ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಈ ಬಾರಿಯೂ ಮುಳುಗಡೆಯಾಗಿದೆ. ಕಳೆದ ಬಾರಿ ಸಹ ಹೆಬ್ಬಾಳೆ ಸೇತುವೆ ಹಲವು ಬಾರಿ ಮಳುಗಡೆಯಾಗಿತ್ತು. ಭಾರೀ ಮಳೆಯಿಂದಾಗಿ ಭದ್ರಾ ಅಪಾಯ ಮಟ್ಟ ಮೀರಿ ತುಂಬಿ ಹರಿಯುತ್ತಿದೆ.

Leave a Reply

Your email address will not be published.

Back to top button