CrimeDharwadDistrictsKarnatakaLatestMain Post

ಮನೆ ನಿರ್ಮಾಣಕ್ಕೆ ಬಾಲಕ ಬಲಿ – ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿ

ಹುಬ್ಬಳ್ಳಿ: ಮನೆ ನಿರ್ಮಾಣಕ್ಕೆ ಕುರಿ, ಕೋಳಿ ಬಲಿ ಕೊಡುವುದನ್ನು ಕೇಳಿದ್ದೇವೆ. ಆದರೆ ಈಗ ಮನೆ ನಿರ್ಮಾಣಕ್ಕೆ ಬಾಲಕನನ್ನು ಬಲಿ ಕೊಡಲಾಗಿದೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಹುಣಸಿ ಗ್ರಾಮದ ಶಿವರುದ್ರಪ್ಪ ಅವರ ಮೇಲೆ ಈ ಆರೋಪ ಕೇಳಿ ಬಂದಿದೆ. ಗ್ರಾಮದ ಬಾಲಕ ಹರೀಶಯ್ಯ ನಾಗಯ್ಯ ಹಿರೇಮಠನಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಮಾರ್ಚ್ 16ರಂದು ಮಗ ಅಂಗಡಿಗೆ ಹೋಗಿದ್ದ. ಈ ವೇಳೆ ಬಾಲಕನನ್ನು ಅಪಹರಣ ಮಾಡಿ ಮನೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಗುಂಡಿಯಲ್ಲಿ ಕಟ್ಟಿ ಹಾಕಿ ಮೈಮೇಲೆ ಇಟ್ಟಿಗೆಗಳನ್ನ ಇಟ್ಟಿದ್ದಾರೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

ಬಾಲಕ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಸಂಜೆ ಹುಡುಕಾಟ ನಡೆಸಿದ ಬಳಿಕ ಕಟ್ಟಡ ಕಟ್ಟುತ್ತಿದ್ದ ಕಾಮಗಾರಿಯ ಸ್ಥಳದ ಗುಂಡಿಯಲ್ಲಿ ಹರೀಶಯ್ಯ ಪತ್ತೆಯಾಗಿದ್ದಾನೆ. ಬಾಲಕನಿಗೆ ಗಾಯಗಳಾದ ಹಿನ್ನೆಲೆಯಲ್ಲಿ ಮೊದಲು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.

ಶಿವರುದ್ರಪ್ಪ ಹಾವೇರಿ, ಬಸವಣ್ಣೆವ್ವ ಪ್ರಭಾಕರ ಕರಿಶೆಟ್ಟರ, ಪ್ರವೀಣ ಕರಿಶೆಟ್ಟರ, ಕುಮಾರ ವೀರಭದ್ರಪ್ಪ ಹಾವೇರಿ ಎನ್ನುವವರು ಮಗನನ್ನು ಬಲಿ ಕೊಡಲು ಮುಂದಾಗಿದ್ದರು ಎಂದು ತಂದೆ ನಾಗಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕನ ಪೋಷಕರು ದೂರು ನೀಡಿದ ನಂತರ ಆರೋಪಿಗಳು ಪರಾರಿಯಾಗಿದ್ದು, ಘಟನೆಯ ಕುರಿತು ಹಾನಗಲ್ ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button