CinemaLatestMain PostNational

ಮನೆಯಲ್ಲಿ ಶವವಾಗಿ ಪತ್ತೆಯಾದ ಬಾಲಿವುಡ್ ನಟ ಆಸೀಫ್ ಬಾಸ್ರಾ

ಶಿಮ್ಲಾ: ಬಾಲಿವುಡ್‍ನ ಖ್ಯಾತ ಪೋಷಕ ನಟ ಆಸೀಫ್ ಬಾಸ್ರಾ ಹಿಮಾಚಲ ಪ್ರದೇಶದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

53 ವರ್ಷದ ಆಸೀಫ್ ಇತ್ತೀಚೆಗೆ ಬಿಡುಗಡೆಯಾಗಿದ್ದ ವೆಬ್ ಸರಣಿ ಪಾತಾಳ್ ಲೋಕ್‍ನಲ್ಲಿ ಅಭಿನಯಿಸಿದ್ದರು. ಇವರು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಆತ್ಮಹತ್ಯೆ ಎಂದು ತಿಳಿದು ಬಂದಿದ್ದರೂ, ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ಮಾಡುತ್ತಿದ್ದಾರೆ.

ಆಸೀಫ್ ಬಾಸ್ರಾ ಅವರು ಧರ್ಮಶಾಲಾದ ಜನಪ್ರಿಯ ಪ್ರವಾಸಿ ತಾಣ ಮೆಕ್ಲಿಯೊಡ್ ಗಂಜ್‍ನಲ್ಲಿ ಗುತ್ತಿಗೆ ಆಸ್ತಿ ಹೊಂದಿದ್ದರು. ಜೊತೆಗೆ ಆಗ್ಗಾಗೆ ಇಲ್ಲಿಗೆ ಭೇಟಿ ನೀಡಿ ಪ್ರವಾಸಿ ತಾಣ ವೀಕ್ಷಿಸಿ ಇಲ್ಲೆ ತಂಗುತ್ತಿದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಮತ್ತು ಪೊಲೀಸರು ಬಂದಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಮಾಡುತ್ತಿದ್ದೇವೆ ಎಂದು ಎಸ್‍ಎಸ್‍ಪಿ ಕಾಂಗ್ರಾ ವಿಮುಕ್ತ್ ರಂಜನ್ ಅವರು ಹೇಳಿದ್ದಾರೆ.

ಆಸೀಫ್ ಬಾಸ್ರಾ ಅವರು ಇತ್ತೀಚೆಗೆ ಬಿಡುಗಡೆಯಾದ ಪಾತಾಳ್ ಲೋಕ್, 1993ರ ಮುಂಬೈ ಬ್ಲಾಸ್ಟ್, ಬ್ಲ್ಯಾಕ್ ಫ್ರೈಡೇ, ಜಬ್ ವಿ ಮೆಟ್, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಕ್ರಿಶ್ 3, ಏಕ್ ವಿಲನ್ ಮತ್ತು 2002ರಲ್ಲಿ ನಡೆದ ಗುಜರಾತ್ ಗಲಭೆ ಕುರಿತು 2005ರಲ್ಲಿ ತೆರೆಕಂಡ ಪಾರ್ಜಾನಿಯಾ ಸಿನಿಮಾದಲ್ಲೂ ಕೂಡ ನಟಿಸಿದ್ದರು. ಆಸೀಫ್ ಮೂಲತಃ ರಂಗಭೂಮಿ ಕಲಾವಿದರಾಗಿದ್ದು, ವಿದೇಶದಲ್ಲೂ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಾಟಕಗಳನ್ನು ಮಾಡಿದ್ದರು.

Leave a Reply

Your email address will not be published.

Back to top button