ಧಾರವಾಡ: ಜಿಲ್ಲಾ ಆಯುಷ್ ಅಧಿಕಾರಿಯೊಬ್ಬರು ತಮ್ಮ ಸೇವಾ ನಿವೃತ್ತಿ ದಿನದ ಕೊನೆ ಗಳಿಗೆಯವರೆಗೂ ಕರ್ತವ್ಯ ನಿರ್ವಹಿಸಿ ಅಧಿಕಾರ ಹಸ್ತಾಂತರಿಸಿದರು.
ನಿರ್ಗಮಿತ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಗಮೇಶ್ ಕಲಹಾಳ ಅವರು ಕರ್ತವ್ಯದ ಅವಧಿಯ ಕೊನೆಯ ಗಳಿಗೆಯವರೆಗೂ ಜವಾಬ್ದಾರಿ ನಿರ್ವಹಿಸಿ, ಸರ್ಕಾರದ ಋಣ ತೀರಿಸಬೇಕೆಂಬ ಆದರ್ಶ ಹೊಂದಿದ್ದರು. ಅದೇ ರೀತಿ ಮೇ 31ರ ಮಧ್ಯರಾತ್ರಿ 12 ಗಂಟೆಗೆ ಅಧಿಕಾರ ಹಸ್ತಾಂತರಿಸಿದರು.
Advertisement
ತಮ್ಮ ನಿವೃತ್ತಿಯ ದಿನ ಮಾತನಾಡಿರುವ ಇವರು, ಸರ್ಕಾರದ ನಿಯಮದಂತೆ ಒಂದು ದಿನವೆಂದರೆ ಮಧ್ಯರಾತ್ರಿ 12 ಗಂಟೆಯಿಂದ ಮುಂದಿನ ದಿನದ ಮಧ್ಯರಾತ್ರಿ 12 ರವರೆಗೆ ಎಂದು ಸೂಚಿಸಲಾಗಿದೆ. ಒಂದು ದಿನದ ವೇತನವೆಂದರೆ 24 ತಾಸುಗಳಿಗೆ ನೀಡುವಂತಹದ್ದಾಗಿದೆ ಎಂದರು.
Advertisement
ನೌಕರರು ಸಮರ್ಥವಾಗಿ ಕಾರ್ಯನಿರ್ವಹಿಸಲು ದೈಹಿಕ, ಮಾನಸಿಕ ಆರೋಗ್ಯದೃಷ್ಟಿಯಿಂದ ಕೆಲಸದ ವೇಳೆಯನ್ನು ನಿಗದಿಪಡಿಸಲಾಗಿರುತ್ತದೆ. ಹೀಗಿದ್ದರೂ ಅತ್ಯವಶ್ಯಕ ಮತ್ತು ತುರ್ತು ಸ್ಥಿತಿಯಲ್ಲಿ ದಿನದ ಯಾವುದೇ ಸಂದರ್ಭದಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಸರ್ಕಾರದ ಉದಾತ್ತವಾದ ಧೋರಣೆಯಂತೆ ನೌಕರರ ನಿವೃತ್ತಿ ವರ್ಗಾವಣೆ ಸಂದರ್ಭದಲ್ಲಿ ಕಾರ್ಯಭಾರ ವಹಿಸಲು ಕಾರ್ಯಭಾರ ವಹಿಸಿಕೊಡುವ ದಿನ ಸರ್ಕಾರಿ ರಜೆ ಇದ್ದಲ್ಲಿ ಹಿಂದಿನ ಕೆಲಸದ ದಿನ ಕಾರ್ಯಭಾರ ವಹಿಸಿಕೊಡಬಹುದಾಗಿದೆ ಎಂದು ಹೇಳಿದರು.