– ಸಾಯುವ ಮುನ್ನ ಪ್ರೇಮಿಗಳು ವಿವಾಹ
– ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತು
ಹೈದರಾಬಾದ್: ಅತ್ತೆ ಮನೆಯಿಂದ ಕಾಣೆಯಾಗಿದ್ದ ಯುವತಿಯೊಬ್ಬಳು ಪ್ರಿಯಕರನ ಜೊತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ನವಾಬ ಪೇಟೆಯಲ್ಲಿ ನಡೆದಿದೆ.
ಸಂಗರೆಡ್ಡಿಯ ಜಿಲ್ಲೆಯ ಗೊಲ್ಲಪಲ್ಲಿ ಗ್ರಾಮದ ಮೀನಾ ಮತ್ತು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಮೃತ ಕಾರ್ತಿಕ್ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಮೀನಾ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರು ಅಕ್ಕಪಕ್ಕದಲ್ಲಿ ಇರುವುದರಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರು ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದಾರೆ. ಆದರೆ ಪೋಷಕರು ಬೇರೆ ಜಾತಿ ಎಂದು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಪ್ರೇಮಿಗಳು ಫೋನ್ ಮೂಲಕ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಮೀನಾ ಪೋಷಕರು ಕಳೆದ ವಾರ ಬಲವಂತವಾಗಿ ಬೇರೆ ಹುಡುಗನ ಜೊತೆ ಮದುವೆ ಮಾಡಿಸಿದ್ದರು.
Advertisement
Advertisement
ಮಂಗಳವಾರ ಮಧ್ಯಾಹ್ನ ಮೀನಾ ತನ್ನ ಅತ್ತೆ ಮನೆಯಿಂದ ನಾಪತ್ತೆಯಾಗಿದ್ದಳು. ನಂತರ ಮೀನಾಳನ್ನು ಕಾರ್ತಿಕ್ ತನ್ನ ಬೈಕಿನಲ್ಲಿ ನವಾಬ ಪೇಟೆ ಮಂಡಲದ ಪೂಲಪಲ್ಲಿಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಇಬ್ಬರು ಒಟ್ಟಿಗೆ ಸಾಯಲು ನಿರ್ಧರಿಸಿದ್ದರು. ಸಾಯುವ ಮುನ್ನ ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಪ್ರೀತಿಯನ್ನು ಪೋಷಕರು ಒಪ್ಪಲಿಲ್ಲ. ಇದರಿಂದ ನಾವು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಾಗಿದೆ. ಹೀಗಾಗಿ ಒಟ್ಟಿಗೆ ಸಾಯಲು ನಿರ್ಧರಿಸಿದ್ದೇವೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ನೋಟ್ ಬರೆದಿದ್ದಾರೆ.
ಪೂಲಪಲ್ಲಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರುದಿನ ಗ್ರಾಮದ ಜನರು ಜಮೀನಿಗೆ ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಎಸ್ಐ ಕೃಷ್ಣ ತಮ್ಮ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.
ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ಕಾರ್ತಿಕ್ ಮತ್ತು ಮೀನಾ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮದುವೆಯಾಗಿದ್ದಾರೆ. ಮೀನಾಗೆ ಈಗಾಗಲೇ ಮದುವೆಯಾಗಿದ್ದು, ತಾಳಿಯನ್ನು ಬಿಚ್ಚಿಟ್ಟಿದ್ದಳು. ಆದರೆ ಮೀನಾಳ ಕುತ್ತಿಗೆಯಲ್ಲಿ ಅರಿಶಿಣದ ಕೊಂಬಿನ ತಾಳಿ ಇತ್ತು. ಹೀಗಾಗಿ ಅವರು ಸಾಯುವ ಮುನ್ನ ಮದುವೆ ಆಗಬೇಕೆಂದು ಇಷ್ಟಪಟ್ಟಿದ್ದರು ಎಂದು ಎಸ್ಐ ಕೃಷ್ಣ ತಿಳಿಸಿದ್ದಾರೆ.