– ಹಳ್ಳಕೊಳ್ಳಗಳು ಭರ್ತಿ, ಅಪಾರ ಪ್ರಮಾಣದ ಬೆಳೆ ನಾಶ
– ಕೊಡಗಿನಲ್ಲಿ ಮತ್ತೆ ಪ್ರವಾಹ ಭೀತಿ
ಮಡಿಕೇರಿ/ಧಾರವಾಡ: ರಾಜ್ಯದ ಅನೇಕ ಕಡೆ ಮತ್ತೆ ವರುಣದೇವ ಅಬ್ಬರಿಸಲು ಶುರುಮಾಡಿದ್ದು, ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವುದರಿಂದ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ. ಇದರಿಂದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಇತ್ತ ಬರೋಬ್ಬರಿ ಒಂದು ದಶಕದ ಬಳಿಕ ಸಂಡೂರಿನ ನಾರಿಹಳ್ಳ ಜಲಾಶಯ ಭರ್ತಿಯಾಗಿದೆ.
Advertisement
ಕೊಡಗಿನ ಕಾವೇರಿ ಉಗಮ ಸ್ಥಾನ ತಲಕಾವೇರಿ, ಭಾಗಮಂಡಲ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ನೀರಿನ ಹರಿಯುವಿಕೆಯಲ್ಲಿ ಭಾರೀ ಏರಿಕೆಯಾಗಿದ್ದು, ಸಂಗಮ ಭರ್ತಿಯಾಗಲು ಇನ್ನೆರಡು ಅಡಿಗಳು ಮಾತ್ರವೇ ಬಾಕಿ ಇದೆ. ಒಂದು ಮಳೆ ಹೀಗೆ ಮುಂದುವರಿದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗುವ ಸಾಧ್ಯತೆ ಇದೆ.
Advertisement
Advertisement
ಮಡಿಕೇರಿ, ನಾಪೋಕ್ಲು, ಸುಂಟಿಕೊಪ್ಪ, ಮಾದಾಪುರ, ಗಾಳಿಬೀಡು ಸೇರಿದಂತೆ ಬಹುತೇಕ ಕಡೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ಹೀಗಾಗಿ ಕೊಡಗಿನ ಜನರಲ್ಲಿ ಮತ್ತೆ ಪ್ರವಾಹ ಮತ್ತು ಭೂಕುಸಿತದ ಭೀತಿ ಎದುರಾಗಿದೆ. ವಿರಾಜಪೇಟೆ ತಾಲೂಕಿನ ಕರಡಿಗೋಡು ಗುಹ್ಯ ಬೆಟ್ಟದ ಕಾಡು ಭಾಗಗಳಲ್ಲಿ ಕಾವೇರಿ ನದಿಯ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.
Advertisement
ಕಳೆದ ರಾತ್ರಿಯಿಂದ ಬಳ್ಳಾರಿಯಲ್ಲಿ ಧಾರಾಕಾರ ಮಳೆ ಆರಂಭವಾಗಿದ್ದು, ಜಿಲ್ಲೆಯ ಬಳ್ಳಾರಿ ಸಂಡೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಇತ್ತ ಮಳೆಯಿಂದಾಗಿ ಬರೋಬ್ಬರಿ ಒಂದು ದಶಕದ ಬಳಿಕ ಸಂಡೂರಿನ ನಾರಿಹಳ್ಳ ಜಲಾಶಯ ಭರ್ತಿಯಾಗಿದ್ದು, ಸಂಡೂರಿನ ಸೊಬಗು ಇಮ್ಮಡಿಯಾಗಿದೆ. ಸಂಡೂರು ಉತ್ತರ ಕರ್ನಾಟಕದ ಮಲೆನಾಡು ಅಂತಲೇ ಖ್ಯಾತಿ ಪಡೆದಿದ್ದು, ಗಿರಿಶೃಂಗಗಳ ಮಧ್ಯದಲ್ಲಿ ತುಂಬಿನಿಂತಿರುವ ನಾರಿಹಳ್ಳದ ದೃಶ್ಯ ಮನಮೋಹಕವಾಗಿದೆ.
ಬಳ್ಳಾರಿ ಜಿಲ್ಲೆಯ ಬಹುತೇಕ ಹಳ್ಳಕೊಳ್ಳಗಳು ಭರ್ತಿಯಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಸಿರುಗುಪ್ಪ ತಾಲೂಕಿನ ಹೆಚ್.ಹೊಸಹಳ್ಳಿ ಮತ್ತು ಹಾಗಲೂರು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಹಳ್ಳದ ನೀರು ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹಳ್ಳದ ನೀರು ರಸ್ತೆಯ ಮೇಲೆ ಹರಿಯುತ್ತಿರುವ ಹಿನ್ನೆಲೆ ಗ್ರಾಮದ ಸಂಪರ್ಕ ಕಡಿತವಾಗಿದೆ.
ಧಾರವಾಡದಲ್ಲಿ ರಾತ್ರಿ ಸುರಿದ ಮಳೆಗೆ ನಗರದ ಹಾಶ್ಮಿನಗರ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ರಸ್ತೆಗಳೆಲ್ಲ ಹಳ್ಳದಂತೆ ಆಗಿವೆ. ಬಡಾವಣೆಯ ನಿವಾಸಿಗಳು ಮನೆಯಿಂದ ಹೊರಬರಲು ಸಾಧ್ಯವಾಗದೆ ಪರದಾಡಿದ್ದಾರೆ. ರಸ್ತೆಯಲ್ಲಿ ನಿಂತ ನೀರು ಹರಿದು ಹೋಗಲು ಚರಂಡಿ ಕೂಡ ನಿರ್ಮಾಣ ಮಾಡಿಲ್ಲ. ಹೀಗಾಗಿ ಸ್ಥಳೀಯರು ರಸ್ತೆಯಲ್ಲಿ ನಿಂತ ನೀರನ್ನ ಬಕೆಟ್ಗಳಲ್ಲಿ ತುಂಬಿ ಹೊರ ಹಾಕಿದ್ದಾರೆ. ಪ್ರತಿ ವರ್ಷ ಮಳೆ ಬಂದಾಗ ರಸ್ತೆಗಳು ಇದೇ ಸ್ಥಿತಿಯಲ್ಲಿ ಇರುತ್ತವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.