– ಯು.ಟಿ.ಖಾದರ್ ಬಳಿ ಹೇಳಿಸಿಕೊಂಡು ತರೋ ಅಗತ್ಯವಿಲ್ಲ
ಚಿಕ್ಕಮಗಳೂರು: ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು, ತಂದೇ ತರುತ್ತೇವೆ. ಆದರೆ ಅದನ್ನು ಯು.ಟಿ.ಖಾದರ್ ಬಳಿ ಹೇಳಿಸಿಕೊಂಡು ತರುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜು ಜಾಗದ ಸ್ಥಳ ವೀಕ್ಷಣೆ ನಡೆಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಎಲ್ಲಾ ಹಂತಗಳಲ್ಲಿ ಚರ್ಚೆಯಾಗಿದೆ. ಬಹುಶಃ ಮುಂದಿನ ಅಧಿವೇಶದನದಲ್ಲಿ ಜಾರಿಗೆ ತರುತ್ತೇವೆ ಎಂದರು.
Advertisement
Advertisement
ಇದೇ ವೇಳೆ ವಿದ್ಯುತ್ ದರ ಹೆಚ್ಚಳಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಸರ್ಕಾರಕ್ಕೂ ಕೂಡ ಆರ್ಥಿಕ ಇತಿಮಿತಿ ಇದೆ. ಸರ್ಕಾರ ಎಂದಾಕ್ಷಣ ಅಕ್ಷಯ ಪಾತ್ರೆಯಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸರ್ಕಾರದ ಬಳಿ ಹಣ ಇಲ್ಲ ಎಂದರು. ಸರ್ಕಾರಕ್ಕೆ ಬಹಳ ಕಠಿಣ ಸವಾಲುಗಳು ಇದೆ. ಕೋವಿಡ್ನ ಆರ್ಥಿಕ ದುಸ್ಥಿತಿ ಕೂಡ ಸರ್ಕಾರಕ್ಕೆ ಬರದಂತೆ ಬಡಿದಿದೆ. ಒಂದೇ ವರ್ಷದಲ್ಲಿ ಎರಡು ಬಾರಿ ಅತಿವೃಷ್ಟಿಯಾಗಿ ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದ್ದೇವೆ. ಕಳೆದ ಎಂಟು ತಿಂಗಳಿಂದ ಆರು ಕೋಟಿ ಜನರಿಗೆ ವಿವಿಧ ಬಗೆಯಲ್ಲಿ ಕೋವಿಡ್ ನಿರ್ವಹಣೆ ಮಾಡಿದ್ದೇವೆ. ಯಾವುದೇ ಸಿಬ್ಬಂದಿಗೂ ವೇತನ ಕಡಿತ ಮಾಡಿಲ್ಲ, ಎಲ್ಲಾ ಸಿಬ್ಬಂದಿಗೂ ಪರಿಪೂರ್ಣ ವೇತನ ನೀಡಿ ಅಭಿವೃದ್ಧಿಯನ್ನೂ ಮಾಡಿದ್ದೇವೆ. ಆರ್ಥಿಕ ಚಟುವಟಿಕೆಗಳು ಕಡಿಮೆಯಾಗಿದ್ದು ಎಲ್ಲಾ ರೀತಿಯಲ್ಲೂ ಹಣದ ಕ್ರೋಢೀಕರಣಕ್ಕೆ ಕಷ್ಟಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಸರ್ಕಾರ ಕೂಡ ಬೆಲೆ ಹೆಚ್ಚಳವನ್ನು ಸಂತೋಷದಿಂದ ಮಾಡುವುದಿಲ್ಲ. ಅನಿವಾರ್ಯ ಪರಿಸ್ಥಿತಿಯಿಂದ ಮಾಡುವಂತಾಗಿದೆ.
Advertisement
Advertisement
ಕಳೆದ ಎಂಟು ತಿಂಗಳಿಂದ ಸಾರಿಗೆ ವ್ಯವಸ್ಥೆ ಮಾಡಿದ್ದೇವೆ. ನೂರಾರು ಕೋಟಿ ರೂಪಾಯಿ ನಷ್ಟದಲ್ಲಿ ನಡೆಯುತ್ತಿದೆ. ನಷ್ಟವಾಗುತ್ತಿದೆ ಎಂದು ಯಾವುದನ್ನೂ ನಿಲ್ಲಿಸಿಲ್ಲ. ಸರ್ಕಾರ ತುಂಬಾ ಕಠಿಣ ಪರಿಸ್ಥಿತಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವಾಗ ಮುಖ್ಯಮಂತ್ರಿಗಳು ಸ್ವಲ್ಪ ಮಟ್ಟಿಗೆ ವಿದ್ಯುತ್ ದರವನ್ನ ಹೆಚ್ಚು ಮಾಡಿದ್ದಾರೆ. ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಚಿಂತನೆ ಮಾಡಿದ್ದಾರೆಂದು ತಿಳಿದುಕೊಂಡಿದ್ದೇನೆ. ಜನ ಅದಕ್ಕೆ ಸಹಕರಿಸಬೇಕು ಎಂದರು.
ಪಟಾಕಿ ನಿಷೇಧದ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಪಟಾಕಿಯನ್ನ ಬೇರೆ ಬೇರೆ ರಾಜ್ಯ ಕೂಡ ನಿಷೇಧ ಮಾಡಿದೆ. ಜನರ ಆರೋಗ್ಯ ಹಾಗೂ ಜೀವ ಮುಖ್ಯ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಂಡಿದ್ದಾರೆ. ಪಟಾಕಿ ಹಾಗೂ ಪಟಾಕಿಯ ಹೊಗೆ ಮಾರಕ ಎಂಬುದು ವರ್ತಕರಿಗೆ ಗೊತ್ತಿಲ್ವಾ. ಕೆಲವರ ಲಾಭಕ್ಕಾಗಿ ಕೋಟ್ಯಾಂತರ ಜೀವ ಹಾಗೂ ಆರೋಗ್ಯವನ್ನ ನಿರ್ಲಕ್ಷ್ಯ ಮಾಡೋದಕ್ಕೆ ನಮ್ಮ ಸರ್ಕಾರಕ್ಕೆ ಸಾಧ್ಯವಿಲ್ಲ. ನಮಗೆ ಕರ್ನಾಟಕದ ಜನರ ಆರೋಗ್ಯದ ಕಾಳಜಿಯೇ ಮುಖ್ಯ.
ಪರಿಸರ ಸ್ನೇಹಿ ಪಟಾಕಿಗಳಿಗೆ ಅವಕಾಶ ಕೊಟ್ಟಿದ್ದಾರೆ. ಪಟಾಕಿ ತಯಾರು ಮಾಡುತ್ತಿರುವವರಿಗೂ ಕೋವಿಡ್ ಏನೆಂದು ಗೊತ್ತಿದೆ. ಯಾಕೆ ಅವರು ತಯಾರು ಮಾಡಬೇಕಿತ್ತು ಎಂದು ಪ್ರಶ್ನಿಸಿದರು. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಲ್ಲ ಎಂದು ಗೊತ್ತಿರುತ್ತೆ. ಆದರೆ, ಕೆಲವರಿಗೆ ಅವರ ಲಾಭವೇ ಅವರಿಗೆ ಮುಖ್ಯ ಎಂದರು.