– ಜಹಗೀರದಾರರು, ಜಮೀನ್ದಾರಿ ಪದ್ಧತಿ ಮತ್ತೆ ತರುವ ಪ್ರಯತ್ನ
– ಅಂಬಾನಿ, ಅದಾನಿ ಕೃಷಿ ಮಾಡ್ತಾನಾ..?
ಬೆಂಗಳೂರು: ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತಂದಿದೆ. ಕ್ಯಾಬಿನೆಟ್ನಲ್ಲಿ ತಿದ್ದುಪಡಿಗೆ ತೀರ್ಮಾನ ಮಾಡಿದಾಗಲೇ ವಿರೋಧ ಮಾಡಿದ್ದೇವು. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಸುಗ್ರೀವಾಜ್ಞೆ ತರಲ್ಲ ಎಂದು ಅಂದುಕೊಂಡಿದ್ದೆ. ಆದರೆ ಕೊರೊನಾ ಸಂದರ್ಭ ಬಳಸಿಕೊಂಡು ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರ ವಿರುದ್ಧ ಕಿರಿಕಾರಿದ್ದಾರೆ.
Advertisement
ಕುಮಾರಕೃಪಾ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗೆ ಸುಗ್ರೀವಾಜ್ಞೆ ತಂದಿರುವುದು ಕರ್ನಾಟಕಕ್ಕೆ ಕರಾಳವಾದ ದಿನವಾಗಿದೆ. ರೈತರ, ಕೂಲಿ ಕಾರ್ಮಿಕರ, ಹಿಂದುಳಿದವರ ವಿರೋಧಿಯಾದ ತಿದ್ದುಪಡಿಯ ಸುಗ್ರೀವಾಜ್ಞೆ ಇದಾಗಿದೆ ಎಂದರು.
Advertisement
ಸುಮಾರು 13,814 ಪ್ರಕರಣಗಳು ಬಾಕಿ ವಿಚಾರಣೆಯಲ್ಲಿದ್ದವು. ಆದರೆ ಸದ್ಯ ಸುಗ್ರೀವಾಜ್ಞೆಯಿಂದ ಎಲ್ಲ ಪ್ರಕರಣಗಳು ವಜಾ ಆಗುತ್ತವೆ. 79ಎ, 79ಬಿ ರದ್ದತಿಯ ಹಿಂದೆ ಷಡ್ಯಂತ್ರವಿದೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚು ಕೇಸ್ಗಳು ದಾಖಲಾಗಿದ್ದು, ಸುಮಾರು 45-50 ಸಾವಿರ ಕೋಟಿ ರೂಪಾಯಿ ಬೆಳೆ ಬಾಳುವ ಜಮೀನಿನ ಕೇಸ್ಗಳು ವಜಾ ಮಾಡಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಸೆಕ್ಷನ್ 63ಕ್ಕೆ ತಿದ್ದುಪಡಿ ತರುವ ಮೂಲಕ ಒಂದು ಕುಟುಂಬಕ್ಕೆ ಇದ್ದ 118 ಎಕರೆ ಮಿತಿಯನ್ನು 436 ಎಕರೆಗೆ ಹೆಚ್ಚಿಸಿದ್ದಾರೆ. 436 ಎಕರೆ ಯಾರು ತೆಗೆದುಕೊಳ್ತಾರೆ? ರೈತರು ಅಷ್ಟು ಜಮೀನು ತೆಗೆದುಕೊಳ್ತಾರಾ? ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲ ಆಗಲಿದೆ. ಇಡೀ ರೈತ ಸಮುದಾಯ ನಾಶ ಮಾಡಲು ಸರ್ಕಾರ ಹೊರಟಿದೆ. ಎಲ್ಲರೂ ಕಾರ್ಪೋರೆಟ್ ಸಂಸ್ಥೆಗಳ ಬಾಗಿಲು ಕಾಯಬೇಕಾದ ಸ್ಥಿತಿ ಬರುತ್ತೆ. ಬಂಡಾವಳಶಾಹಿಗಳು ಭೂಮಿ ತಗೊಂಡು ರಿಯಲ್ ಎಸ್ಟೇಟ್ ಮಾಡ್ತಾರೆ. ಆಗ ಆಹಾರ ಉತ್ಪಾದನೆ ಎಲ್ಲಿ ಆಗುತ್ತೆ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದಿಂದ ಜಹಗೀರದಾರರು, ಜಮೀನ್ದಾರಿ ಪದ್ಧತಿ ಮತ್ತೆ ತರುವ ಪ್ರಯತ್ನ ನಡೆಯುತ್ತಿದೆ. ಅಂಬಾನಿ, ಅದಾನಿ ಕೃಷಿ ಮಾಡ್ತಾನಾ? ರಿಯಲ್ ಎಸ್ಟೇಟ್ ಮಾಡ್ತಾನೆ. ಇದು ಸಾಮಾನ್ಯ ರೈತರ ಮೇಲೆ ದುಷ್ಪರಿಣಾಮ ಬೀರುತ್ತೆ. ಇದು ಗಣಿ ಹಗರಣಕ್ಕಿಂತ ದೊಡ್ದ ಹಗರಣ. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ತೆಗೆದುಕೊಂಡು ರೈತರ ಭೂಮಿಯನ್ನು ಕೊಡುತ್ತಿದ್ದಾರೆ. ಈ ಸರ್ಕಾರ ರೈತ ವಿರೋಧಿ ಸರ್ಕಾರ ಎಂದರು.
ಇಡೀ ರಾಜ್ಯ ಸರ್ಕಾರವೇ ಈ ಹಗರಣದಲ್ಲಿ ಹಗರಣದಲ್ಲಿ ಭಾಗಿಯಾಗಿದೆ. ನಮ್ಮ ಪಕ್ಷ ಒಕ್ಕೊರಲಿನಿಂದ ಸುಗ್ರೀವಾಜ್ಞೆ ಮತ್ತು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದೆ. ಕೊರೊನಾ ಸಂದರ್ಭದಲ್ಲಿ ಸುಗ್ರೀವಾಜ್ಞೆ ತರುವ ಅಗತ್ಯತೆ ಏನಿತ್ತು? ಕೊರೊನಾದಲ್ಲಿ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ, ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಈ ಬಗ್ಗೆ ಹೋರಾಟ ಮಾಡುವುದನ್ನು ಬಿಟ್ಟು ಕಳ್ಳದಾರಿಯಲ್ಲಿ ಹೊರಟಿದ್ದೀರಿ. ಪಕ್ಷದಲ್ಲಿ ತೀರ್ಮಾನಿಸಿ ಗಣಿ ಹೋರಾಟದ ರೀತಿಯೇ ಭೂ ಸುಧಾರಣಾ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರ ವಿರುದ್ಧ ಆರೋಪಿಸಿದರು.
ಮುಖ್ಯ ಕಾರ್ಯದರ್ಶಿಗಳಿಗೆ ಕೋವಿಡ್ ಲೆಕ್ಕ ಕೊಡಿ ಅಂತಾ ಪತ್ರ ಬರೆದಿದ್ದೇನೆ. 2-3 ದಿನಗಳಲ್ಲಿ ಲೆಕ್ಕ ಕೊಡುವುದಾಗಿ ಹೇಳಿದ್ದಾರೆ. ಲೆಕ್ಕ ಕೊಟ್ಟ ಮೇಲೆ ಮತ್ತೆ ಬರುತ್ತೇನೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿವೆ. ಮೊದಲು ಸೋಂಕು ಹರಡದಂತೆ ಕ್ರಮವಹಿಸಬೇಕು. ಮೂಲಭೂತ ಸೌಲಭ್ಯಗಳನ್ನ ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ವರ್ಕ್ ಇನ್ಸ್ ಪೆಕ್ಟರ್ ಮತ್ತು ಪೌರಕಾರ್ಮಿಕ ಸಾವಿನ ಪ್ರಕರಣಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯ ಸರ್ಕಾರ, ಬಿಬಿಎಂಪಿ ನಿಷ್ಕ್ರಿಯವಾಗಿದ್ದು ವಿಫಲವಾಗಿದೆ. ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವಾರಿಯರ್ಸ್ ಗೆ ಸಹಾಯ ಮಾಡಲು ಆಗಿಲಿಲ್ಲ ಎಂದರೇ ಏನು ಹೇಳಬೇಕು? ಸರ್ಕಾರ ಅಗತ್ಯವಾಗಿ ಎರಡು ಕೆಲಸಗಳನ್ನು ಮಾಡಬೇಕಿದೆ. ಮೊದಲು ಪಾಸಿಟಿವ್ ಬಂದ ರೋಗಿಗಳನ್ನು ಗುಣಪಡಿಸಬೇಕು. ಇದರೊಂದಿಗೆ ರೋಗ ಬರದಂತೆ ತಡೆಯಬೇಕಾಗಿದ್ದು, ಸರ್ಕಾರ ಇದನ್ನೇ ಮಾಡುತ್ತಿಲ್ಲ ಎಂದರು.