ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ, ಜೀವಂತವಾಗಿರುವುದಾಗಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಛೋಟಾ ರಾಜನ್ ಅವರು ಶುಕ್ರವಾರ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ ವರದಿಯಾಗಿತ್ತು. ಇಂತಹ ವರದಿಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಏಮ್ಸ್ ಆಸ್ಪತ್ರೆ ಅಧಿಕಾರಿಗಳು, ಛೋಟಾ ರಾಜನ್ ಇನ್ನೂ ಜೀವಂತವಾಗಿದ್ದಾರೆ. ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ.
ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 62 ವರ್ಷ ವಯಸ್ಸಿನ ಪಾತಕಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಏಪ್ರಿಲ್ 26 ರಂದು ಏಮ್ಸ್ಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿರುವುದನ್ನು ಏಮ್ಸ್ ನಿರಾಕರಿಸಿದೆ.
Underworld don Chhota Rajan is still alive. He is admitted at AIIMS for treatment of #COVID19: AIIMS official
(File photo) pic.twitter.com/gvAgKDuPqC
— ANI (@ANI) May 7, 2021
ತಿಹಾರ್ ಜೈಲಿನ ಅಧಿಕಾರಿ ಛೋಟಾ ರಾಜನ್ ಕೊರೊನಾ ಸೋಂಕಿಗೆ ತುತ್ತಾಗಿರೋದನ್ನ ನ್ಯಾಯಾಲಯಕ್ಕೆ ತಿಳಿಸಿದ್ದರು. ಅನಾರೋಗ್ಯ ಹಿನ್ನೆಲೆ ಕೊರೊನಾ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ಪಾಸಿಟಿವ್ ಬಂದಿತ್ತು.
2015ರಲ್ಲಿ ಇಂಡೋನೇಷ್ಯಾದ ಬಾಲಿ ಪೊಲೀಸರು ಛೋಟಾ ರಾಜನ್ ನನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಅಂದಿನಿಂದ ರಾಜನ್ ತಿಹಾರ್ ಜೈಲಿನಲ್ಲಿದ್ದ. ರಾಜನ್ ವಿರುದ್ಧ ಪ್ರಕರಣದ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ರಾಜನ್ಗೆ ಕೋವಿಡ್ ಸೋಂಕು ತಗುಲಿದ್ದರಿಂದ ಈ ಹಿಂದೆ ವಿಚಾರಣೆಗೆ ಹಾಜರುಪಡಿಸಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದರು.
ಛೋಟಾ ರಾಜನ್ನನ್ನು 2015ರ ಅಕ್ಟೋಬರ್ ನಲ್ಲಿ ಇಂಡೊನೇಷ್ಯಾದಲ್ಲಿ ಭಾರತದ ಅಧಿಕಾರಿಗಳು ಬಂಧಿಸಿದ್ದರು. ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. 75 ಅಪರಾಧಗಳ ಪೈಕಿ ಭಯೋತ್ಪಾದನೆ ತಡೆ ಕಾಯ್ದೆ ಮತ್ತು ಮಹರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ 20 ಕ್ಕೂ ಹೆಚ್ಚು ಪ್ರಕರಣಗಳು ರಾಜನ್ ವಿರುದ್ಧ ದಾಖಲಾಗಿವೆ.
ಏನಿದು ಪ್ರಕರಣ:
ನಂದು ವಾಜೆಕರ್ ಎಂಬ ಬಿಲ್ಡರ್ 2015 ರಲ್ಲಿ ಪುಣೆಯಲ್ಲಿ ಜಮೀನು ಖರೀದಿಸಿದ್ದನು. ಪರಮಾನಂದ ಠಕ್ಕರ್ ಎಂಬ ಏಜೆಂಟನಿಗೆ 2 ಕೋಟಿ ಕೊಡಬೇಕಾಗಿತ್ತು. ಆದರೆ ಪರಮಾನಂದ ಠಕ್ಕರ್ ಹೆಚ್ಚಿನ ಹಣವನ್ನು ಬೇಡಿಕೆಯಿಟ್ಟಿದ್ದಾನೆ. ಈ ಬೇಡಿಕೆಗೆ ವಾಜೇಕರ್ ಒಪ್ಪಲಿಲ್ಲ. ನಂತರ ಪರಮಾನಂದ ಠಕ್ಕರ್ ಛೋಟಾ ರಾಜನ್ನನ್ನು ಸಂಪರ್ಕಿಸಿ ಈ ಡೀಲ್ ಮಾಡುವಂತೆ ಹೇಳಿದ್ದನು. ನಂತರ ಛೋಟಾ ರಾಜನ್ ಬಿಲ್ಡರ್ ನಂದು ವಾಜೆಕರ್ಗೆ 26 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದನು. ಹಣವನ್ನು ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.