Connect with us

Chamarajanagar

ಭಿಕ್ಷಾಟನೆಗೆ ಬೈ ಹೇಳಿ ಅನ್ನದಾತರಾದ ಮಂಗಳಮುಖಿಯರು

Published

on

ಚಾಮರಾಜನಗರ: ಲಾಕ್‍ಡೌನ್ ನಲ್ಲಿ ಹಲವರು ಉದ್ಯೋಗ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದವರ ನಡುವೆ ಇವರಿಬ್ಬರು ಮಾದರಿ ಬದುಕು ನಡೆಸಲು ಮುಂದಡಿ ಇಟ್ಟಿದ್ದಾರೆ, ಅಷ್ಟಕ್ಕೂ ಇವರು ಸಾಮಾನ್ಯರಲ್ಲ ಸದಾ ಸಮಾಜದಲ್ಲಿ ಅವಮಾನಿತರಾಗುವ ಲೈಂಗಿಕ ಅಲ್ಪಸಂಖ್ಯಾತರು.

ಹೌದು. ಚಾಮರಾಜನಗರ ಜಿಲ್ಲೆಯ ಯಾನಗಹಳ್ಳಿ ಗ್ರಾಮದ ಮೀನಾ ಹಾಗೂ ರಾಗಿಣಿ ಎಂಬ ಲೈಂಗಿಕ ಅಲ್ಪಸಂಖ್ಯಾತರು ಲಾಕ್‍ಡೌನ್ ಬಳಿಕ ಭಿಕ್ಷಾಟನೆ ಬಿಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಸ್ವಾವಲಂಬಿ ಜೀವನ ನಡೆಸಲು ಪ್ರಾರಂಭಿಸಿದ್ದಾರೆ. ಮೀನಾ, ಕಳೆದ 5 ವರ್ಷದ ಹಿಂದೆಯೇ ಮುಂಬೈನಿಂದ ಹಿಂತಿರುಗಿದ್ದಾರೆ. ರಾಗಿಣಿ 4 ವರ್ಷದ ಹಿಂದೆ ಗ್ರಾಮಕ್ಕೆ ವಾಪಾಸ್ಸಾಗಿದ್ದಾರೆ.

ಆಗಾಗ್ಗೆ ಇವರು ಭಿಕ್ಷಾಟನೆಗೆ ತೆರಳುತ್ತಿದ್ದರೂ ಲಾಕೌಡೌನ್ ನಲ್ಲಿ ಇವರ ಕಲೆಕ್ಷನ್ ಕಾರ್ಯ ನಿಂತಿತ್ತು. ಪಾಲಕರ ಬೆಂಬಲದಿಂದ ರೈತರಾಗಿ ಬಾಳಲು ಮುಂದಾಗಿದ್ದು ರಾಗಿಣಿ ಹೈನುಗಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮೀನಾ ಅವರ ಬಳಿ ತಂದೆ ಆಸ್ತಿಯಾದ 2.5 ಜಮೀನಿದ್ದು ಬಿದ್ದ ಮಳೆಗೆ ಭೂಮಿಯನ್ನು ಹದಗೊಳಿಸಿ ಜೋಳ ಬೆಳೆಯಲು ತೀರ್ಮಾನಿಸಿದ್ದಾರೆ. ಸರ್ಕಾರದ ಯೋಜನೆಯಡಿ ಕೊಳವೆಬಾವಿಯನ್ನು ಕೊರೆಯಿಸಿ ಕೊಟ್ಟರೇ ಬದುಕಿಗೊಂದು ದಾರಿಯಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ರಾಗಿಣಿ ಅವರು ತಂದೆ ನಡೆಸುತ್ತಿದ್ದ ಹೈನುಗಾರಿಕೆ ಮುಂದುವರಿಸಿ 8 ಹಸುಗಳನ್ನು ಸಾಕುತ್ತಿದ್ದಾರೆ. ಬರುವ ಆದಾಯದಲ್ಲಿ ಸಂಸಾರದ ನೊಗವನ್ನು ನಡೆಸುತ್ತಿದ್ದು ಸ್ವಾವಲಂಬಿ ಬದುಕನ್ನು ನಡೆಸುತ್ತಿದ್ದಾರೆ. ವಿಶೇಷ ಎಂದರೆ ಇವರಿಬ್ಬರೂ ತಮ್ಮ ತಾಯಂದಿರನ್ನು ನೋಡಿಕೊಳ್ಳುತ್ತಿದ್ದು ಒಂದು ಕಾಲದಲ್ಲಿ ಮನೆಯವರಿಂದ ದೂಷಣೆಗೆ ಒಳಗಾಗಿದ್ದರು. ಆದರೆ, ಅದೇ ಅವಮಾನಿತ ಮಕ್ಕಳು ಈಗ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದು ಪಾಲಕರನ್ನು ಸಾಕದಿರುವ ಎಷ್ಟೋ ಮಕ್ಕಳಿಗೆ ಇವರು ಆದರ್ಶಪ್ರಾಯರಾಗಿದ್ದಾರೆ.

Click to comment

Leave a Reply

Your email address will not be published. Required fields are marked *