BelgaumDistrictsKarnatakaLatestMain Post

ಬೈಕ್‌, ಟಿವಿ, ‍ಫ್ರಿಡ್ಜ್‌ ಇದ್ದರೆ ಬಿಪಿಎಲ್ ಪಡಿತರ ರದ್ದು – ಉಮೇಶ್‌ ಕತ್ತಿ

ಬೆಳಗಾವಿ: ಮನೆಯಲ್ಲಿ ಬೈಕ್, ಫ್ರಿಡ್ಜ್‌, ಟಿವಿ ಇದ್ದರೆ ಬಿಪಿಎಲ್‌ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಎಕ್ರೆಗಿಂತದ ಹೆಚ್ಚಿನ ಜಮೀನು, ಮನೆಯಲ್ಲಿ ಬೈಕ್‌, ಟಿವಿ, ಫ್ರಿಡ್ಜ್‌ ಇದ್ದವರ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ. ಇವುಗಳಲ್ಲಿ ಯಾವುದಾದರು ಒಂದು ಇದ್ದರೂ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ. ಇಂಥವರಿಗೆ ತಮ್ಮ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಲು ಮಾರ್ಚ್‌‌ ಅಂತ್ಯದವರೆಗೆ ಸಮಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

 

ಏಪ್ರಿಲ್‌ ಬಳಿಕ ಸರ್ಕಾರ ಕಾರ್ಡ್‌ ಹೊಂದಿರುವವರ ಪರಿಶೀಲನೆ ನಡೆಸಲಿದೆ. ಈ ವೇಳೆ ಎಲ್ಲಾ ಸೌಲಭ್ಯ ಇದ್ದು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಅವರಿಗೆ ದಂಡದ ಜತೆ ಶಿಕ್ಷೆಯೂ ನೀಡಲಾಗುತ್ತದೆ ಎಂದು ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ಅಧಿಕಾರಿಗಳು, ಅರೆ ಸರ್ಕಾರಿ ಅಧಿಕಾರಿಗಳು, 1.20 ಲಕ್ಷ ರೂ. ಆದಾಯ ಇರುವವರು ಬಿಪಿಎಲ್‌ ಕಾರ್ಡ್‌ ಹೊಂದಿರಲು ಸಾಧ್ಯವೇ ಇಲ್ಲ. ಅದರೂ ಕೆಲ ಅಧಿಕಾರಿಗಳು ಬಿಪಿಎಲ್ ಕಾರ್ಡ್‌ ಹೊಂದಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಹೀಗಾಗಿ ಈಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

 

ಈ ಕಾರಣಕ್ಕೆ ಕಾರ್ಡ್‌ ಹೊಂದಿದವರಿಗೆ ಮತ್ತೊಂದು ಅವಕಾಶವನ್ನು ಸರ್ಕಾರ ನೀಡುತ್ತಿದೆ. ಮಾರ್ಚ್ ಅಂತ್ಯದ ವರೆಗೆ ಸ್ವಯಂ ಪ್ರೇರಿತವಾಗಿ ಬಿಪಿಎಲ್‌ ಕಾರ್ಡ್‌ ಸರ್ಕಾರಕ್ಕೆ ಹಿಂದಿರುಗಿಸಲು ಸೂಚನೆ ನೀಡಲಾಗಿದೆ. ಬಳಿಕ ಸರ್ಕಾರವೇ ಸರ್ವೇ ನಡೆಸಿ ಪತ್ತೆ ಹಚ್ಚಲಿದೆ ಎಂದು ಹೇಳಿದರು.

ಇದೇ ವೇಳೆ ಏಪ್ರಿಲ್‌ನಿಂದ ಉತ್ತರದ ಜಿಲ್ಲೆಗಳಿಗೆ ಅಕ್ಕಿ ಜೊತೆ ಜೋಳ ಹಾಗೂ ದಕ್ಷಿಣದ ಜಿಲ್ಲೆಗಳಿಗೆ ಅಕ್ಕಿ ಜತೆ ರಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಕೇಂದ್ರ ಸಚಿವರ ಬಳಿ ಚರ್ಚೆ ನಡೆಸಲಾಗುವುದು ಎಂದು ಕತ್ತಿ ತಿಳಿಸಿದರು.

Leave a Reply

Your email address will not be published.

Back to top button